
ಬೆಂಗಳೂರು,ಜೂ.೨೪-ರಾಜ್ಯದ ರಾಜ್ಯಪಾಲರು ಅಂಕಿತ ಹಾಕಲು ನಿರಾಕರಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿರುವ ೫ ಪ್ರಮುಖ ವಿಧೇಯಕಗಳಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೋರಿದರು ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದೌರ್ಪದಿ ಮುರ್ಮು ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಕಿ ಇರುವ ರಾಜ್ಯದ ವಿಧೇಯಕಗಳಿಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು
ರಾಜ್ಯದ ಶಾಲೆಗಳಲ್ಲಿ ೧ ರಿಂದ ೫ನೇ ತರಗತಿವರೆಗೆ ಮಾತೃಭಾಷೆ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕುಕಾಯ್ದೆ-೨೦೧೫ ಅಲ್ಪಸಂಖ್ಯಾತರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ. ೪ ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ತಿದ್ದುಪಡಿ ವಿಧೇಯಕ-೨೦೨೫, ರಾಜ್ಯದ ಎ ವರ್ಗದ ದೇವಾಲಯಗಳಲ್ಲಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯ ಶೇ. ೫ರಿಂದ ಶೇ. ೧೦ ರಷ್ಟು ಆದಾಯವನ್ನು ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧiದಾಯ ದತ್ತಿಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕ ಮತ್ತು ನೋಟರಿ ಕರ್ನಾಟಕ ತಿದ್ದುಪಡಿ ವಿಧೇಯಕ ಈ ೫ ವಿಧೇಯಕಗಳ ಅಂಕಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಯವರಿಗೆ ಮನವಿ ಮಾಡಿದರು
ಈ ೫ ತಿದ್ದುಪಡಿ ವಿಧೇಯಕಗಳನ್ನು ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಈ ವಿಧೇಯಕಗಳಿಗೆ ಸಹಿ ಹಾಕಲು ನಿರಾಕರಿಸಿ ಅವುಗಳನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ವಿಧೇಯಕಗಳ ಬಗ್ಗೆ ವಿವರ ನೀಡಿ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ಸಚಿವರಾದ ಡಾ. ಎಚ್ ಸಿ ಮಾದೇವಪ್ಪ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅಶೋಕ್ ಪಟ್ಟಣ ಮತ್ತಿತರರು ಇದ್ದರು