ಬೆಂಗಳೂರು, ಅ. ೨೧- ಬೆಂಗಳೂರಿನ ರಸ್ತೆಗಳ ದುಸ್ತಿತಿ ಬಗ್ಗೆ ಬಹಿರಂಗವಾಗಿಯೇ ಟೀಕೆ ಮಾಡಿದ್ದ ಉದ್ಯಮಿ ಕಿರಣ್ ಮುಜುಂದಾರ್ ಶಾ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಚರ್ಚಿಸಿದರು.
ದೀಪಾವಳಿ ಹಬ್ಬದ ಶುಭಾಶಯ ಕೋರಲು ಉದ್ಯಮಿ ಕಿರಣ್ ಮುಜುಂದಾರ್ ಶಾ ಅವರು ಮೊದಲಿಗೆ ಡಿ.ಕೆ.ಶಿವಕುಮಾರ್ ಅವರು ಸದಾಶಿವನಗರದ ನಿವಾಸಕ್ಕೆ ತೆರಳಿ ಅವರಿಗೆ ದೀಪಾವಳಿ ಶುಭಾಶಯ ಹೇಳಿ ಸುಮಾರು ಹೊತ್ತು ಚರ್ಚೆ ನಡೆಸಿದರು.
ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದ ಅವರು ಮುಖ್ಯಮಂತ್ರಿಗಳಿಗೆ ದೀಪಾವಳಿ ಶುಭಾಶಯ ಕೋರಿದರು.

ಖ್ಯಾತ ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿಂದು ಭೇಟಿ ಮಾಡಿ ಚರ್ಚಿಸಿದರು.
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಬಹಿರಂಗವಾಗಿ ಟೀಕೆ ಮಾಡಿ ಸರ್ಕಾರ ಒಪ್ಪಿದರೆ ತಮ್ಮ ಸ್ವಂತ ದುಡ್ಡಿನಲ್ಲಿ ರಸ್ತೆಗಳನ್ನು ಸರಿಪಡಿಸುತ್ತೇನೆ ಎಂದು ಕಿರಣ್ ಮುಜುಂದಾರ್ ಶಾ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿ
ಐಟಿ-ಬಿಟಿ ಉದ್ಯಮಿಗಳು ಪದೇ ಪದೇ ಬೆಂಗಳೂರಿನ ಮೂಲ ಸೌಕರ್ಯದ ಬಗ್ಗೆ ಟೀಕೆ ಮಾಡುತ್ತಿರುವುದಕ್ಕೆ ಗರಂ ಆಗಿದ್ದ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಸೌಲಭ್ಯವನ್ನು ಬಳಸಿಕೊಂಡು ಬೆಳೆದಿರುವವರು ಟೀಕೆ ಮಾಡುವುದನ್ನು ಬಿಡಲಿ ರಾಜ್ಯ ಸರ್ಕಾರ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳಾಗುವುದು ಸಹಜ. ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸುವುದಾಗಿ ಹೇಳಿದ್ದರು.
ರಸ್ತೆ ಗುಂಡಿ ವಿಚಾರದಲ್ಲಿ ಸರ್ಕಾರ ಮತ್ತ ಉದ್ಯಮಿ ಕಿರಣ್ ಮುಜುಂದಾರ್ ಶಾ ಬಹಿರಂಗ ಜಟಾಪಟಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ಇದೆಲ್ಲದರ ನಡುವೆ ಕಿರಣ್ ಮುಜುಂದಾರ್ ಶಾ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ನಾನಾ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ.



























