ನಾಳೆ ಮತ್ತೆ ಸಿಎಂ-ಡಿಸಿಎಂ ಉಪಹಾರ ಸಭೆ

ಬೆಂಗಳೂರು, ಡಿ. ೧- ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ಉಪಹಾರ ಸಭೆಯ ಮೂಲಕ ವಿರಾಮ ಹಾಡಿ ಒಗ್ಗಟ್ಟು ಪ್ರದರ್ಶಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಒಗ್ಗಟ್ಟಿನ ಮುಂದುವರೆದ ಭಾಗವಾಗಿ ನಾಳೆ ಮತ್ತೆ ಉಪಹಾರ ಸಭೆ ನಡೆಸಲಿದ್ದು, ನಾಳಿನ ಉಪಹಾರ ಸಭೆ ಉಪಮುಖ್ಯಮಂತ್ರಿ ನಿವಾಸದಲ್ಲಿ ನಡೆಯಲಿದೆ.


ಎರಡು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮನೆಯಲ್ಲಿ ಉಪಹಾರ ಸಭೆ ನಡೆದು, ಈ ಇಬ್ಬರೂ ನಾಯಕರು ಒಗ್ಗಟ್ಟು ಪ್ರದರ್ಶಿಸಿ, ರಾಜ್ಯದಲ್ಲಿ ಕುರ್ಚಿ ಕಿತ್ತಾಟಕ್ಕೆ ವಿರಾಮ ಬಿದ್ದಿರುವ ಸಂದೇಶ ರವಾನಿಸಿದ್ದರು.


ಈ ಉಪಹಾರ ಸಭೆಯ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ತಮ್ಮ ನಿವಾಸಕ್ಕೆ ಊಟಕ್ಕೆ ಬರುವಂತೆ ಆಹ್ವಾನ ನೀಡಿದ್ದರು.ಈ ಆಹ್ವಾನವನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಊಟದ ಬದಲು ನಾಳೆ ಬೆಳಗ್ಗೆ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಮನೆಗೆ ತೆರಳಿ ಉಪಹಾರ ಕೂಟದಲ್ಲಿ ಭಾಗಿಯಾಗುವರು.
ಈ ತಿಂಗಳ ೮ ರಂದು ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ವಿಪಕ್ಷಗಳಿಗೆ ತಮ್ಮ ಅಧಿಕಾರ ಹಂಚಿಕೆಯ ಕಿತ್ತಾಟ ಆಹಾರವಾಗಬಾರದು ಎಂಬುದನ್ನು ಅರಿತಿರುವ ಈ ಇಬ್ಬರೂ ನಾಯಕರು, ಉಪಹಾರ ಸಭೆಯ ಮೂಲಕ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ನಾವಿಬ್ಬರೂ ಒಂದಾಗಿ, ಒಟ್ಟಾಗಿ ಇದ್ದೇವೆ ಎಂಬ ಸಂದೇಶ ರವಾನಿಸಲು ಮುಂದಾಗಿದ್ದಾರೆ.


ಕಳೆದ ೧೫ ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ತಾರಕಕ್ಕೇರಿತ್ತು. ಅಧಿಕಾರ ಹಂಚಿಕೆಯ ಕಗ್ಗಂಟಿಗೆ ಪರಿಹಾರ ಕಂಡುಕೊಳ್ಳುವ ವಿಚಾರ ಹೈಕಮಾಂಡ್ ಅಂಗಳ ತಲುಪಿತ್ತು. ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ನೀವಿಬ್ಬರೇ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದು ನಂತರ ದೆಹಲಿಗೆ ಬನ್ನಿ ಎಂಬ ಸೂಚನೆ ನೀಡಿತ್ತು.


ಹೈಕಮಾಂಡ್ ಸೂಚನೆ ಬೆನ್ನಲ್ಲೆ ಸಿದ್ಧರಾಮಯ್ಯ ಕಳೆದ ಶನಿವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉಪಹಾರಕ್ಕೆ ಆಗಮಿಸಿ ಅವರ ಜತೆ ಚರ್ಚೆ ನಡೆಸಿ ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ವಿರಾಮ ಹಾಡಿದ್ದರು.


ಈಗ ಮುಖ್ಯಮಂತ್ರಿ ಸಿದ್ಧಱಾಮಯ್ಯ ಅವರನ್ನು ಉಪಹಾರಕ್ಕೆ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನಿಸಿ ನಾವಿಬ್ಬರೂ ಒಂದಾಗಿದ್ದೇವೆ. ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಲು ಮುಂದಾಗಿದ್ದಾರೆ.


ಹೈಕಮಾಂಡ್ ಅಂಗಳದಲ್ಲಿ ಚೆಂಡು


ಅಧಿಕಾರ ಹಂಚಿಕೆಯ ಕಿತ್ತಾಟ ಕಗ್ಗಂಟಿಗೆ ಪರಿಹಾರ ದೊರಕಿಸುವ ವಿಚಾರ ಈಗ ಹೈಕಮಾಂಡ್‌ನ ಅಂಗಳದಲ್ಲಿದ್ದು, ಹೈಕಮಾಂಡ್ ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಿದೆ.


ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟು, ಕಾಂಗ್ರೆಸ್ ಬೆಳವಣಿಗೆಗೆಳಿಗೆ ಸಂಬಂಧಿಸಿದಂತೆ ವರದಿ ನೀಡಿ ಆದಷ್ಟು ಬೇಗ ಪರಿಹಾರ ಸೂತ್ರ ಕಲ್ಪಿಸುವಂತೆ ಕೋರಿದ್ದಾರೆ.


ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರು ಸಮಯ ನೋಡಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆದಷ್ಟು ಶೀಘ್ರ ದೆಹಲಿಗೆ ಕರೆಸಿಕೊಂಡು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್‌ನ ತೀರ್ಮಾನವನ್ನು ಈ ಇಬ್ಬರು ನಾಯಕರುಗಳಿಗೆ ತಿಳಿಸುವರು ಎಂದು ಕಾಂಗ್ರೆಸ್ ಮೂಲಗಳು ಹೇಳೀವೆ.


ಈಗ ಸಂಸತ್ ಅಧಿವೇಶನ ನಡೆದಿದೆ. ಜತೆಗೆ ರಾಜ್ಯ ವಿಧಾನಮಂಡಲದ ಅಧಿವೇಶನವನ್ನು ಮುಂದಿನ ವಾರ ಆರಂಭವಾಗಲಿದ್ದು ಅಧಿವೇಶನದ ಬಳಿಕವೆ ಅಧಿಕಾರ ಹಂಚಿಕೆಯ ಕಗ್ಗಂಟಿಗೆ ಪರಿಹಾರವನ್ನು ಹೈಕಮಾಂಡ್ ಪ್ರಕಟಿಸಲಿದೆ ಎಂದು ಹೇಳಲಾಗಿದೆ.