ಸಿಎಂ ಬದಲಾವಣೆ ಹೈಕಮಾಂಡ್ ಕೈಯಲ್ಲಿ: ಸಚಿವ ಎಂ.ಬಿ. ಪಾಟೀಲ

ವಿಜಯಪುರ, ಜೂ. 28:ಸಿಎಂ ಕುರ್ಚಿ ಖಾಲಿ ಇಲ್ಲ. ಸಿಎಂ, ಸಂಪುಟ ಪುನಾರಚನೆ ಅಧ್ಯಕ್ಷರ ವಿಚಾರ ಇವೆಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಇದು ಇಕ್ಬಾಲ್ ಕೈಯಲ್ಲೂ ಇಲ್ಲ, ಎಂ.ಬಿ. ಪಾಟೀಲ ಕೈಯಲ್ಲೂ ಇಲ್ಲ. ಯಾರ ಕೈಯಲ್ಲೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಡಿಸೆಂಬರ್ ಗೆ ಡಿಕೆಶಿ ದೇವರಾಣೆಯಾಗಿ ಸಿಎಂ ಆಗ್ತಾರೆ ಎನ್ನುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿ ಸುದ್ದಿಗಾರರ ಜೊತೆಗೆ ಶುಕ್ರವಾರ ಮಾತನಾಡಿದರು.
ಕಾಂಗ್ರೆಸ್ ನಲ್ಲಿ ಏನೇ ನಿರ್ಧಾರ ಮಾಡಬೇಕಾದರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಇದೆ. ಎಲ್ಲವೂ ಅಲ್ಲಿ ಅಂತಿಮವಾಗಿ ನಿರ್ಧಾರವಾಗುತ್ತದೆ ಎಂದರು.
ಸೆಪ್ಟೆಂಬರ್ ಸಿಕ್ರೆಟ್ ಎನ್ನುವ ಸಚಿವ ರಾಜಣ್ಣ ಹೇಳಿಕೆ ವಿಚಾರ ಬಗ್ಗೆ ಅವರು ಪ್ರತಿಕ್ರಿಯಿಸಿ, ಅವರು ಹಿರಿಯರಿದ್ದಾರೆ, ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವ ಕ್ರಾಂತಿ ನಡೆಯಲ್ಲ. ಕಾಂಗ್ರೆಸ್ ನಾವು ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗಿಯಾಗಿದ್ದವರು ಎಂದು ತಿಳಿಸಿದರು.
ಜೆಡಿಎಸ್, ಬಿಜೆಪಿಯಿಂದ ಬಹಳ ಜನ ಶಾಸಕರು ಕಾಂಗ್ರೆಸ್ ಗೆ ಸೇರಬಹುದು. ಸಚಿವ ರಾಜಣ್ಣ ಇದು ಕ್ರಾಂತಿ ಆಗುತ್ತದೆ ಎಂದು ಹೇಳಿರಬಹುದು ಎಂದು ನುಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ. ಪಾಟೀಲ ಹೆಸರು ಪ್ರಸ್ತಾಪ ವಿಚಾರಕ್ಕೆ, ನಾನು ಆಕಾಂಕ್ಷಿಯೂ ಅಲ್ಲ, ಈ ಬಗ್ಗೆ
ಕೇಳಿಯೂ ಇಲ್ಲ ಎಂದರು.
ವಿಜಯಪುರ ಸೇರಿದಂತೆ ರಾಜ್ಯದಲ್ಲಿ ಮನೆ ಹಂಚಿಕೆಗೆ ಹಣ ಬೇಡಿಕೆ ವಿಚಾರ ಬಗ್ಗೆ, ಎಲ್ಲಿ ಭ್ರಷ್ಟಾಚಾರ ಆಗಿದೆ, ಸತ್ಯಾಸತ್ಯತೆ ಅರಿತುಕೊಂಡು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.