ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

ಬಂಗಾರಪೇಟೆ,ಆ ೨- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್, ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ,ಬಂಗಾರಪೇಟೆ ವಲಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಕೋಲಾರ ಜಿಲ್ಲಾ ಜನ ಜಾಗೃತಿ ವೇದಿಕೆ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಹಾಗೂ ತಾಲ್ಲೂಕು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಡಾ|| ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ೧೯೫೭ ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಹಾಗೂ ಕುಟುಂಬ ದಿನ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.


ಮದ್ಯ ವ್ಯಸನದಿಂದ ಮುಕ್ತರಾದವರ ಜೀವನದಲ್ಲಿ ಅಪೂರ್ವ ಕ್ಷಣ. ವ್ಯಸನದ ಅಮಲಿನಲ್ಲಿ ಕುಟುಂಬವನ್ನೇ ಮರೆತಿದ್ದ ವ್ಯಕ್ತಿಗಳು ಎಂಟು ದಿನಗಳ ಮಧ್ಯ ವರ್ಜನಾ ಶಿಬಿರದಲ್ಲಿ ಅಂತರಂಗ ಶುದ್ಧಿಗಳಾಗಿ ಮನ ಪರಿವರ್ತನೆಯಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಎದುರು ಇನ್ನು ಮುಂದೆ ಮದ್ಯ ಸೇವನೆ ಮಾಡುವುದಿಲ್ಲವೆಂದು ಪ್ರಮಾಣ ಮಾಡಿದರು. ಬಂಗಾರಪೇಟೆ ಪಟ್ಟಣದ ಕೆಂಪೇಗೌಡ ಭವನದಲ್ಲಿ ನಡೆದ ಎಂಟು ದಿನಗಳ ಮದ್ಯವರ್ಜನ ಶಿಬಿರದ ಕೊನೆಯ ದಿನ ನವಜೀವನಕ್ಕೆ ಕಾಲಿಟ್ಟ ವ್ಯಕ್ತಿಗಳಿಗೆ ಮದುವೆಯ ಈ ಬಂಧ ಅನುರಾಗದ ಅನುಬಂಧ ಎನ್ನುವ ಹಾಡಿನೊಂದಿಗೆ ಭವಿಷ್ಯ ಬೆಳಕಾಗಲಿ ಎಂದು ಸೇರಿದ್ದ ಗಣ್ಯರು ಸುಗಂಧ ದ್ರವ್ಯ ಸಿಂಪರಿಸಿ, ಅಕ್ಷತೆ ಹಾಕಿ, ಆರತಿ ಬೆಳಗಿ ಆಶೀರ್ವದಿಸಿದರು.


ನವಜೀವನ ಸಮಿತಿಯ ಸುಮಂಗಲೆಯರು ಶಿಬಿರಾರ್ಥಿಗಳ ಪತ್ನಿಯರಿಗೆ ಅರಿಶಿಣ ಕುಂಕುಮ ಹಚ್ಚಿ ದಾಂಪತ್ಯ ಸುಖವಾಗಿರಲೆಂದು ಹಾರೈಸಿದರು. ಮದ್ಯ ವ್ಯಸನದಿಂದ ಜನ ಮುಕ್ತರಾಗುವಲ್ಲಿ ಧರ್ಮಸ್ಥಳ ಯೋಜನೆ ಕಾರ್ಯ ಶ್ಲಾಘನೀಯ. ಮದ್ಯ ವರ್ಜನ ಶಿಬಿರಗಳಿಂದ ಲಕ್ಷಕ್ಕೂ ಅಧಿಕ ಜನ ಪಾನಮುಕ್ತರಾಗಿದ್ದಾರೆ. ಅಂತವ ಕುಟುಂಬಗಳು ಕತ್ತಲ ಬದುಕಿನಲ್ಲಿ ಬೆಳಕು ಕಾಣುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಜೊತೆಗೆ ಸಮಾಜದ ಎಲ್ಲ ವರ್ಗಗಳ ಜನ ಕುಡಿತದ ವಿರುದ್ಧ ಎದ್ದು ನಿಲ್ಲಬೇಕು ಎಂದು ಮಧ್ಯವರ್ಜನ ಶಿಬಿರದ ಅಧ್ಯಕ್ಷ ಸಂಪತ್ ಗೌಡ ಸಲಹೆ ನೀಡಿದರು.


ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಉಪ ವರಿಷ್ಟಾಧಿಕಾರಿ ಪಿ.ಶಿವಕುಮಾರ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಜಿ. ಪ್ರಕಾಶ್, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಾರ್ಕಂಡೇಗೌಡ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಶ್ರೀ ಕ್ಷೇ.ಧ.ಗ್ರಾ. ಬೆಂಗಳೂರು ಯೋಜನಾಧಿಕಾರಿ ಎಂ.ಸೀನಪ್ಪ, ಪ್ರಾದೇಶಿಕ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೆ. ವಾಸುದೇವ, ಮಧ್ಯ ವರ್ಜನಾ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎನ್. ಸಂಪತ್ ಗೌಡ, ಅಧ್ಯಾತ್ಮ ಪಂಡಿತರಾದ ಜಿ. ರಾಮಸ್ವಾಮಿ, ವಕೀಲರಾದ ಪ್ರಸಾದ್, ಶ್ರೀ ಕ್ಷೇ.ಧ.ಗ್ರಾ ಯೋಜನೆ ಜಿಲ್ಲಾ ನಿರ್ದೇಶಕರಾದ ಶಿವಾನಂದ್ ಆಚಾರ್ಯ, ಶಿಬಿರಾಧಿಕಾರಿ ದೇವಿಶ್ರೀ ಪ್ರಸಾದ್, ತಾಲ್ಲೂಕು ಶ್ರೀ ಕ್ಷೇ.ಧ.ಗ್ರಾ. ಯೋಜನಾಧಿಕಾರಿ ಚೇತನ್ ಕುಮಾರ್, ಅರೋಗ್ಯಅಧಿಕಾರಿ ರಂಜಿತ, ಮೇಲ್ವಿಚಾರಕರಾದ ಅನಿತಾ, ಜನಾರ್ಧನ್ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.