Home ಜಿಲ್ಲೆ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳ ತೆರವುಗೊಳಿಸಿ

ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳ ತೆರವುಗೊಳಿಸಿ

ಬೀದರ್:ಫೆ.20: ರೇಬಿಸ್ ರೋಗದ ಕಾರಣ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಬೇಕು ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಮುದ್ರ ಕುಲಕರ್ಣಿ ಹೇಳಿದರು.
ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ನಗರದ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರೇಬಿಸ್ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕ್ರೀಡಾ ಸಂಕೀರ್ಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ, ಗೊತ್ತುಪಡಿಸಲಾದ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಈಗಾಗಲೇ ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ತಿಳಿಸಿದರು.
ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಎಲ್ಲರೂ ಪ್ರಾಣಿ ಸಂತಾನ ನಿಯಂತ್ರಣ ಕಾಯ್ದೆ 2023 ಅನ್ನು ಪಾಲಿಸಬೇಕು ಎಂದು ಹೇಳಿದರು.
ರೇಬಿಸ್ ರೋಗ ಪ್ರಾಣಿಯಿಂದ ಮನುಷ್ಯನಿಗೆ ಹರಡುತ್ತದೆ. ಸೋಂಕಿತ ಪ್ರಾಣಿ ಮತ್ತೊಂದು ಪ್ರಾಣಿ ಅಥವಾ ಮನುಷ್ಯನಿಗೆ ಕಚ್ಚಿದರೆ ರೋಗ ಹರಡುತ್ತದೆ. ಪ್ರಾಣಿಯ ಜೊಲ್ಲು, ಪ್ರಾಣಿ ಅಥವಾ ಮನುಷ್ಯನ ಲೋಳೆ ಪೆÇರೆ ಸಂಪರ್ಕದಿಂದಲೂ ರೋಗ ಹರಡುತ್ತದೆ. 90 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದರು.
ಜ್ವರ, ತಲೆ ನೋವು, ನುಂಗಲು ಕಷ್ಟವಾಗುವುದು, ವಾಕರಿಕೆ, ಅತಿಯಾಗಿ ಜೊಲ್ಲು ಸೋರುವುದು ರೋಗದ ಲಕ್ಷಣಗಳಾಗಿವೆ ಎಂದು ಹೇಳಿದರು.
ರೇಬಿಸ್ ಮಾರಣಾಂತಿಕ ಕಾಯಿಲೆ ಆಗಿರುವ ಕಾರಣ ಯಾವುದೇ ಪ್ರಾಣಿ ಕಚ್ಚಿದರೆ ನಿರ್ಲಕ್ಷ್ಯ ತೋರಬಾರದು. 0,3,7,14 ಹಾಗೂ 28ನೇ ದಿನ ರೇಬಿಸ್ ರೋಗ ನಿರೋಧಕ ಚುಚ್ಚು ಮದ್ದು ತೆಗೆದುಕೊಳ್ಳಬೇಕು. ಮೂರು ತಿಂಗಳ ಒಳಗೆ ಚುಚ್ಚು ಮದ್ದು ಮತ್ತು ಟೆಟ್ನಸ್ ಟಾಕ್ಸೈಡ್ ಇಂಜಕ್ಷನ್ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯೆ ಡಾ. ದೀಪಾ ರಾಗಾ, ಕಾಲೇಜಿನ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.