ತರಗತಿ ಆರಂಭ ಕಾರ್ಯಕ್ರಮ

ಲಕ್ಷ್ಮೇಶ್ವರ,ಜ10: ಸರ್ಕಾರ ಅಂಗನವಾಡಿಗಳಲ್ಲಿ ಎಲ್‍ಕೆಜಿ-ಯುಕೆಜಿ ಪ್ರಾರಂಭಿಸುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಸಾಕಷ್ಟು ಅನಕೂಲವಾಗುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಪೂರ್ಣಿಮಾ ಪಾಟೀಲ ಹೇಳಿದರು.


ಅವರು ಪಟ್ಟಣದ ಅಂಗನವಾಡಿ ಕೇಂದ್ರ ಸಂಖ್ಯೆ 48ರಲ್ಲಿ ಎಲ್‍ಕೆಜಿ ಹಾಗೂ ಯುಕೆಜಿ ತರಗತಿ ಪ್ರಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪಾಲಕರು ಖಾಸಗಿ ಶಾಲೆಗಳತ್ತ ಚಿತ್ತ ಹರಿಸಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಬಡ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸುವುದು ಮತ್ತು ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸರ್ಕಾರ ಕೈಗೊಂಡಿರುವ ಈ ಕ್ರಮ ಶ್ಲಾಘನೀಯವಾಗಿದೆ. ಆದರೆ ಈ ವ್ಯವಸ್ಥೆ ಯಶಸ್ವಿಯಾಗೊಳಿಸುವಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.


ಈ ವೇಳೆ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಮಕ್ಕಳಿಗೆ ಓದಿನ ಜತೆಗೆ ಪೌಷ್ಠಿಕ ಆಹಾರ, ಆರೋಗ್ಯ ಚಿಕಿತ್ಸೆ, ಸೌಲಭ್ಯ, ಪಠ್ಯೇತರ ಚಟುವಟಿಕೆಗಳಿಗೆ ಈ ಕೇಂದ್ರ ಸಹಾಯಕವಾಗಲಿದೆ ಎಂದು ಹೇಳಿದರು.


ಸಮಾಜ ಸೇವಕ ಶಂಕರ ಬ್ಯಾಡಗಿ, ಪುರಸಭೆ ಮಾಜಿ ಅಧ್ಯಕ್ಷೆ ಜಯಕ್ಕ ಕಳ್ಳಿ ಮಕ್ಕಳಿಗೆ ನೋಟಬುಕ ವಿತರಣೆ ಮಾಡಿ ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನಿಸಿದರು. ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಅನ್ನಪೂರ್ಣ ಹಳ್ಳಿಗುಡಿ, ಆರೋಗ್ಯ ಇಲಾಖೆಯ ಸುಧಾ ಕಂತ್ರೋಜಿ, ವಕೀಲ ಮಹೇಶ ಹಾರೋಗೇರಿ, ಬಿ.ಬಿ ನೇಕಾರ, ಚಿಣ್ಣರು. ಪಾಲಕರು ಇದ್ದರು.