
ಲಕ್ಷೆ÷್ಮÃಶ್ವರ,ಸೆ೨೪: ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನಗರ ಪಟ್ಟಣಗಳನ್ನು ಸ್ವಚ್ಛ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುವ ಸೇನಾನಿಗಳಾಗಿದ್ದಾರೆ. ಸಮಾಜ ಇವರನ್ನು ಗೌರವದಿಂದ ಕಾಣಬೇಕು ಎಂದು ಪುರಸಭೆ ಮಖ್ಯಾಧಿಕಾರಿ ಪರಶುರಾಮ ಗುಡದಾರಿ ಹೇಳಿದರು.
ಅವರು ಪುರಸಭೆ ಸಭಾಭವನದಲ್ಲಿ ೧೫ ನೇ ವರ್ಷದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು. ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭಗಳಾಗಿರುವ ಪೌರಕಾರ್ಮಿಕರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೊಂಡಿರುತ್ತಾರೆ. ಪೌರಕಾರ್ಮಿಕರನ್ನು ಸಮಾಜ ಗೌರವದಿಂದ ಕಾಣಬೇಕು, ಪೌರಕಾರ್ಮಿಕ ದಿನಾಚರಣೆಯಂದು ಮಾತ್ರ ಅವರನ್ನು ಗೌರವಿಸದೆ ನಿತ್ಯ ಅವರ ಬಗ್ಗೆ ಸಮಾಜ ಉತ್ತಮ ಭಾವನೆ ವ್ಯಕ್ತಪಡಿಸಿ ಅವರನ್ನು ಕಾಣಬೇಕು ಎಂದು ಹೇಳಿದರು.
ಪುರಸಭೆ ಪೌರಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ, ಕಂದಾಯ ಅಧಿಕಾರಿ ಸುರೇಶ ಪೂಜಾರ ಮಾತನಾಡಿ ಸ್ವಚ್ಚ ಪಟ್ಟಣ, ನಗರ ನಿರ್ಮಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ಈ ಹಿಂದೆ ಕೆಲವು ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿದ್ದ ಸರಕಾರ ಇನ್ನೂ ಅನೇಕ ಪೌರಕಾರ್ಮಿಕರಿಗೆ ಕಾಯಂ ಮಾಡುವ ಅವಕಾಶವನ್ನು ನೀಡಬೇಕಾಗಿದೆ, ಪಟ್ಟಣದಲ್ಲಿ ಇರುವ ಕೆಲವೆ ಪೌರಕಾರ್ಮಿಕರಿಂದ ಊರಿನ ಸ್ವಚ್ಚತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ನಮ್ಮ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಹಿರಿಯ ಆರೋಗ್ಯ ಸಹಾಯಕ ಮಂಜುನಾಥ ಮುದಗಲ್ ಪ್ರಾಸ್ತಾವಿಕವಾಗಿ ಮಾತನಾಡಿ ಪಟ್ಟಣವು ಸುಮಾರು ೫೦ ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಜನಸಂಖ್ಯೆಗನುಗುಣವಾಗಿ ಪೌರಕಾರ್ಮಿಕರ ಅವಶ್ಯಕತೆ ಇದ್ದು, ಆದರೆ ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ, ಇಲ್ಲಿ ಕನಿಷ್ಠ ೧೦೦-೧೧೦ ಪೌರಕಾರ್ಮಿಕರ ಅವಶ್ಯಕತೆ ಇದ್ದು, ಈಗೀರುವ ಸುಮಾರು ೧೯ ಕಾಯಂ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರು ಸೇರಿ ೪೪ ಜನರು ಮಾತ್ರ ಇದ್ದು, ಕೊರತೆಯ ನಡುವೆಯೂ ನಮ್ಮಲ್ಲಿಯ ಪೌರಕಾರ್ಮಿಕರು ಪ್ರಾಮಾಣಿಕವಾಗಿ ಊರಿನ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರೆಲ್ಲರಿಗೂ ಸನ್ಮಾನಿಸಿ ಸರಕಾರದಿಂದ ಕೊಡಮಾಡಿದ ಚೆಕ್ಕುಗಳನ್ನು ವಿತರಿಸಲಾಯಿತು. ಸಭೆಯಲ್ಲಿ ದೇವಣ್ಣ ನಂದೆಣ್ಣವರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಸಮುಧಾಯ ಸಂಘಟನಾ ಅಧಿಕಾರಿ ಶೈಲಜಾ ಪಾಟೀಲ, ಪತ್ರಕರ್ತ ಅಶೋಕ ಸೊರಟೂರ, ಗೋಣೆಪ್ಪ ಗಡದವರ, ಹನುಮಂತ ನಂದೆಣ್ಣವರ, ನೇತ್ರಾ ಹೊಸಮನಿ, ಎಸ್.ಪಿ.ನಿಂಬಯ್ಯನಮಠ, ಮಹೇಶ ಹೊಸಮನಿ ಮುಂತಾದವರಿದ್ದರು. ಹನುಮಂತ ನಂದೆಣ್ಣವರ ನಿರೂಪಿಸಿದರು.























