
ಬೆಂಗಳೂರು,ಜ.೪-ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿದ್ದ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಲಾಗುವುದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ಪೊಲೀಸರ ಗನ್ ಹಾಗೂ ರಿವಾಲ್ವರ್‌ನಿಂದ ಫೈರಿಂಗ್ ಆಗಿಲ್ಲ, ಖಾಸಗಿ ಗನ್‌ನಿಂದ ಫೈರಿಂಗ್ ಆಗಿದೆ ಎನ್ನುವುದನ್ನು ಎಡಿಜಿಪಿ ದೃಢಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವಿದ್ದು, ಅಗತ್ಯಬಿದ್ದರೆ ಸಿಐಡಿ ತನಿಖೆಗೆ ಒಪ್ಪಿಸುತ್ತೇವೆ ಎಂದು ಹೇಳಿದರು.
ತಮಗೆ ಮತ್ತು ತಮ್ಮ ಕುಟುಂಬಕ್ಕೆ ಭದ್ರತೆ ಕೋರಿ ಸಿಎಂ, ಗೃಹ ಸಚಿವರಿಗೆ ಗಂಗಾವತಿ ಶಾಸಕ ಜನಾರ್ದನರೆಡ್ಡಿ ಪತ್ರ ಬರೆದ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿದ ಪರಮೇಶ್ವರ್, ಶಾಸಕರ ಪತ್ರ ನನಗೆ ಇನ್ನೂ ತಲುಪಿಲ್ಲ. ಪತ್ರ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಜನಾರ್ದನ ರೆಡ್ಡಿ ಬಳ್ಳಾರಿಗೆ ವಾಪಸಾದ ಮೇಲೆ ಗಲಾಟೆ ಎಂಬ ವಿಚಾರ ಕಾಕತಾಳೀಯವೋ ಏನೋ ಗೊತ್ತಿಲ್ಲ, ಆದರೆ ಅವರು ಬಂದ ಮೇಲೆ ಕಲಹ ಆಗಿರುವುದು ನಿಜ ಎಂದು ತಿಳಿಸಿದ್ದಾರೆ.
ಬ್ಯಾನರ್ ಗಲಾಟೆ ವೇಳೆ ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್ ಗುರುಚರಣ್ ಸಿಂಗ್ ಬಂದೂಕಿನಿಂದ ಹಾರಿದ್ದ ಬುಲೆಟ್ ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಹೇಳಿದರು.
ರಾಜಶೇಖರ ಬೆನ್ನು ಹೊಕ್ಕು ಎದಿಯಿಂದ ಆಚೆ ಬಂದಿದ್ದ ಗುಂಡನ್ನು ಪೋಸ್ಟ್ ಮಾರ್ಟಮ್ ವೇಳೆ ಹೊರ ತೆಗೆಯಲಾಗಿದೆ. ಹೊರ ತೆಗೆದ ಬುಲೆಟ್‌ನ ಫಾರೆನ್ಸಿಕ್ ಲ್ಯಾಬ್ ಗೆ ಪರಿಶೀಲನೆಗೆ ಕಳುಹಿಸಲಾಗಿದ್ದು, ದೊರೆತಿರುವುದು ೧೨ ಎಂಎಂ ಸಿಂಗಲ್‌ಬೋರ್ ಗುಂಡು ಎಂಬುದು ದೃಢಪಟ್ಟಿದೆ ಎಂದು ತಿಳಿಸಿದರು.
ಕೇವಲ ನಾಲ್ಕೈದು ಅಡಿ ದೂರದಲ್ಲಿ ಗುಂಡುಹಾರಿದ ಹಿನ್ನೆಲೆ ಓರ್ವ ಮಾತ್ರ ಸಾವನ್ನಪ್ಪಿದ್ದಾನೆ. ಏಕೆಂದರೆ ಸಿಂಗಲ್‌ಬೋರ್ ಬುಲೆಟ್ ಹಾರಿದ ಬಳಿಕ ಸ್ಪ್ರೆಡ್ ಆಗುವ ವಿಶೇಷತೆ ಹೊಂದಿದೆ. ಬುಲೆಟ್ ಹತ್ತು ಅಡಿಗಿಂತ ದೂರ ಹಾರಿದ್ದರೆ ಬುಲೆಟ್ ಸ್ಪ್ರೆಡ್ ಆಗಿ ಇನ್ನಷ್ಟು ಜನರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇತ್ತು ಎನ್ನಲಾಗಿದೆ.

























