ಬಳ್ಳಾರಿ ಗಲಭೆ ಸಿಐಡಿ ತನಿಖೆ ಆರಂಭ

ಬೆಂಗಳೂರು,ಜ.೧೧- ಬಳ್ಳಾರಿ ಗಲಭೆಯ ಬಗ್ಗೆ ಸಿಐಡಿ ತನಿಖೆ ಆರಂಭಗೊಂಡಿದೆ. ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿರುವ ನಾಲ್ಕು ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಬಳ್ಳಾರಿ ಗಲಭೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆನ್ನುವ ಬಿಜೆಪಿ ಬೇಡಿಕೆಯನ್ನು ತಳ್ಳಿಹಾಕಿದ್ದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ನಿರ್ಧರಿಸಿತ್ತು. ಅದರಂತೆ ಸಿಐಡಿ ತನಿಖೆ ಆರಂಭಗೊಂಡಿದೆ.


ವಾಲ್ಮೀಕಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಳ್ಳಾರಿ ನಡೆದ ಗಲಭೆ ಕಾರ್ಯಕರ್ತ ಸಾವು ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಎಲ್ಲಾ ಅಯಾಮದಲ್ಲಿ ತನಿಖೆಯನ್ನು ಕೈಗೊಂಡಿದ್ದಾರೆ.
ಗಲಭೆಯ ಸಂಬಂಧಿಸಿದಂತೆ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲಾ ನಾಲ್ಕು ಪ್ರಕರಣಗಳನ್ನು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು ಇಲ್ಲಿಯವರೆಗೆ ದಾಖಲಾದ ಎಲ್ಲಾ ಎಫ್‌ಐಆರ್ ಹಾಗೂ ಸಂಬಂಧಪಟ್ಟ ತನಿಖೆಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.


ಬಳ್ಳಾರಿಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳ ತಂಡ ತೆರಳಿದ್ದು, ಗಲಭೆಯ ಸಂಪೂರ್ಣ ಕಡತಗಳನ್ನು ಪಡೆದು ಪರಿಶೀಲನೆ ಕೈಗೊಂಡಿದೆ, ನಾಳೆಯಿಂದ ಅಧಿಕಾರಿಗಳ ತಂಡವು ಘಟನೆಗಳು ನಡೆದ ಸ್ಥಳಗಳ ಮಹಜರು ನಡೆಸಲಿದೆ.


ಮಹಜರು ಬಳಿಕ ಕಾರ್ಯಕರ್ತನ ಸಾವು ಗಲಭೆಗೆ ಕಾರಣಗಳು ಗಾಯಗೊಂಡವರಿಂದ ಮಾಹಿತ್ನಿ ಪಡೆಯಲಿದ್ದು, ಶಾಸಕರಾದ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಅವರನ್ನು ವಿಚಾರಣೆ ನಡೆಸಲಿದೆ.
ಅಲ್ಲದೆ ಗಲಭೆಗೆ ಸಂಬಂಧಿಸಿದ ಸಿಸಿ ಕ್ಯಾಮರಾಗಳ ದೃಶ್ಯಗಳು,ಸ್ಥಳೀಯ ಮುಖಂಡರ ಹೇಳಿಕೆಗಳು ಗುಂಡು ಹಾರಿಸಿದ ಸಂಬಂಧ ವಿವರಗಳನ್ನು ಅಧಿಕಾರಿಗಳು ಕಲೆಹಾಕಿ ವಿಸ್ತಾರವಾದ ತನಿಖೆಯನ್ನು ನಡೆಸಲಿದ್ದಾರೆ.


ಕಾರ್ಯಕರ್ತನ ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು ಅದನ್ನು ಕೂಡ ತನಿಖೆ ನಡೆಸಲಿದೆ,ಈಗಾಗಲೇ ಪೊಲೀಸರ ಗನ್ ಹಾಗೂ ರಿವಾಲ್ವರ್‌ನಿಂದ ಫೈರಿಂಗ್ ಆಗಿಲ್ಲ, ಖಾಸಗಿ ಗನ್?ನಿಂದ ಫೈರಿಂಗ್ ಆಗಿದ್ದೆಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರದೃಢಪಡಿಸಿದ್ದಾರೆ.


ಈ ನಡುವೆ ರಾಜಶೇಖರ್ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿಯೇ ನೇರ ಕಾರಣ, ಇಬ್ಬರನ್ನೂ ತಕ್ಷಣ ಬಂಧಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ.


ಸಾಕ್ಷ್ಯನಾಶದ ಪ್ರಯತ್ನ:
ಎರಡು ಬಾರಿ ರಾಜಶೇಖರ್ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದಿದ್ದ ರೆಡ್ಡಿ ಈಗ ಅಂತ್ಯಕ್ರಿಯೆ ಸಂಬಂಧ ಇನ್ನೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಅಂತ್ಯಕ್ರಿಯೆಯಲ್ಲಿ ಸಾಕ್ಷ್ಯನಾಶದ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಸಾಕ್ಷ್ಯಾಧಾರ ಬಿಡುಗಡೆ ಮಾಡಿದ್ದಾರೆ.


ಮೊದಲು ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಿ ಬಳಿಕ ಸುಟ್ಟು ಹಾಕಿದ್ದಾರೆ. ಕಟ್ಟಿಗೆ ಬದಲು ಗ್ಯಾಸ್‌ನಿಂದ ಮೃತದೇಹ ಸುಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ವಿಡಿಯೋ ಸಾಕ್ಷ್ಯ:
ಸ್ಮಶಾನದಲ್ಲಿ ಗುಂಡಿ ತೋಡುವ ಸೋಮ ಎಂಬ ವ್ಯಕ್ತಿಯ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶಾಸಕ ಭರತ್ ರೆಡ್ಡಿ ಸೂಚನೆಯಂತೆಯೇ ಮೃತದೇಹವನ್ನು ಸುಡಲಾಗಿದೆ ಎಂದು ವಿಡಿಯೋ ಸಾಕ್ಷ್ಯ ನೀಡಿದ್ದಾರೆ.

ಬಿಜೆಪಿಯಿಂದ ಬೃಹತ್ ಹೋರಾಟ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿ ಇದೇ ತಿಂಗಳ ೧೭ ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಿದೆ. ಜೊತೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶಾಸಕ ಜನಾರ್ದನ ರೆಡ್ಡಿ ಬಳ್ಳಾರಿ ಗಲಭೆ ಖಂಡಿಸಿ ಜ. ೧೭ ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ. ಜೊತೆಗೆ ಪಾದಯಾತ್ರೆ ನಡೆಸುವ ಚಿಂತನೆಯಿದ್ದು, ಈ ಬಗ್ಗೆ ಪಕ್ಷದ ಅಧ್ಯಕ್ಷರ ಜೊತೆಗೆ ಚರ್ಚಿಸಿ, ಎರಡು ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.

ಫ್ಲೆಕ್ಸ್ ಬ್ಯಾನರ್ ಅಳವಡಿಕೆ ನಿಷೇಧ
ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರಾದ ಜನಾರ್ದನರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ನಡೆದು ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಬ್ಯಾನರ್ ಫ್ಲೆಕ್ಸ್ ಅಳವಡಿಕೆಗೆ ನಿಷೇಧ ಹೇರಲಾಗಿದೆ.


ಬಳ್ಳಾರಿ ನಗರದಲ್ಲಿ ಅನುಮತಿಯಿಲ್ಲದೆ ಬ್ಯಾನರ್ ಫ್ಲೆಕ್ಸ್, ಪೋಸ್ಟರ್ ಹೋರ್ಡಿಂಗ್ಸ್ ಅಳವಡಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ನಿಯಮ ಮೀರಿ ಸ್ಥಳೀಯ ಆಡಳಿತದ ಅನುಮತಿ ಪಡೆಯದೆ ಬ್ಯಾನರ್ ಫ್ಲೆಕ್ಸ್ ಅಳವಡಿಸಿದರೆ, ಫ್ಲೆಕ್ಸ್ ಅಳವಡಿಸುವವರು ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳದೆ ಅಧಿಕಾರದ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಹೇಳಿದೆ.