ಚೌಡಯ್ಯನವರ ಜಯಂತಿ, ಡಾ.ಶಿವಕುಮಾರ ಶ್ರೀಗಳ ಸ್ಮರಣೋತ್ಸವ

ಕಲಬುರಗಿ :ಜ.21: ನಗರದ ಡಬರಾಬಾದ್ ಕ್ರಾಸ್ ಸಮೀಪದ ಪ್ರಭುದೇವ ನಗರದಲ್ಲಿನ ‘ಶ್ರೀ ನೀಲಕಂಠೇಶ್ವರ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಬೆಳಿಗ್ಗೆ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಮತ್ತು ಸಿದ್ದಗಂಗಾ ಮಠದ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿಯವರ 7ನೇ ಲಿಂಗೈಕ್ಯ ಸಂಸ್ಮರಣೋತ್ಸವ ಜರುಗಿತು.
ಉಭಯ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದ ಉಪನ್ಯಾಸಕ ಎಚ್.ಬಿ.ಪಾಟೀಲ್, ಶರಣ ಚಿಂತಕ ಡಾ.ರಾಜಶೇಖರ ಪಾಟೀಲ್, ಸಂಸ್ಥೆಯ ಅಧ್ಯಕ್ಷ ಷಣ್ಮುಖಯ್ಯ ಹಿರೇಮಠ, ಅಂಬಿಗರ ಚೌಡಯ್ಯ ಮತ್ತು ಡಾ.ಶಿವಕುಮಾರ ಶ್ರೀಗಳ ಬಹುಮುಖ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಪಂಡಿತರಾವ ಪಾಟೀಲ್, ಮಲ್ಲಿಕಾರ್ಜುನ ಮೇತ್ರೆ, ಶಾಲೆಯ ಶಿಕ್ಷಕಿಯರಾದ ನಿರ್ಮಲಾ ಮಾಲಿಪಾಟೀಲ್, ಆಶಾರಾಣಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಅಸ್ಪಿಯಾ ಇರ್ಫಾನ್ ವಚನಗಳನ್ನು ವಾಚಿಸಿದಳು.