
ಆಲಮೇಲ :ಡಿ.೨೫: ಮಕ್ಕಳ ಸಾಹಿತ್ಯ ಸರ್ವ ಶ್ರೇಷ್ಠ ಸಾಹಿತ್ಯ ಈ ಸಾಹಿತ್ಯವು ಮಗು ಕೇಂದ್ರಿತ ಸಾಹಿತ್ಯವಾಗಿದೆ ಮಕ್ಕಳಲ್ಲಿ ವಿಭಿನ್ನ ರೀತಿಯ ಪ್ರತಿಭೆಗಳು ಇದ್ದೇ ಇರುತ್ತವೆ ಮಕ್ಕಳಲ್ಲಿ ಅಡಗಿರುವ ಕೌಶಲ್ಯ ಸೃಜನಶೀಲತೆ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ವ್ಯಕ್ತಿತ್ವ ವಿಕಸನ ಉಜ್ವಲ ಭವಿಷ್ಯಕ್ಕಾಗಿ ಶ್ರೇಯೋಭಿವೃದ್ಧಿಗಾಗಿ ಉತ್ತೇಜನಗೊಳ್ಳಲು ಇಂಥ ಸಮ್ಮೇಳನದ ವೇದಿಕೆಗಳು ಪರಿಣಾಮಕಾರಿಯಾಗುತ್ತವೆ ಎಂದು ೧೨ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಮಕ್ಕಳ ಸಾಹಿತಿ ಬಿ.ಆರ್.ನಾಡಗೌಡ ಹೇಳಿದರು.
ಪಟ್ಟಣದ ಶ್ರೀವೀಶ್ವೇಶ್ವರ ದೇವಸ್ಥಾನದ ಆವರಣದಲ್ಲಿ ಮಕ್ಕಳ ಸಾಹಿತ್ಯ ಸಂಗಮ ಏರ್ಪಡಿಸಿದ್ದ ೧೨ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಬಹಳಷ್ಟು ಬದಲಾಗಿದ್ದಾರೆ. ಅವರ ಕೈಯಲ್ಲಿ ಪುಸ್ತಕಗಳಿಗಿಂತ ಹೆಚ್ಚಾಗಿ ಮೊಬೈಲ್ ಮತ್ತು ವಿಡಿಯೋ ಗೇಮ್ಗಳು ಆವರಿಸಿಕೊಂಡಿವೆ. ಈ ಪರಿಸ್ಥಿತಿಯು ನಮ್ಮ ಮುಂದಿನ ಪೀಳಿಗೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ನಾವು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು
ಇಂದಿನ ದಿನಗಳಲ್ಲಿ ಮೊಬೈಲ್ ಮತ್ತು ಟಿವಿಗಳ ಬಳಕೆ ಹೆಚ್ಚಾಗಿದ್ದು, ಪುಸ್ತಕಗಳ ಓದು ಕಡಿಮೆಯಾಗಿದೆ, ಮಕ್ಕಳು ಪುಸ್ತಕಗಳಿಂದ ದೂರವಾದರೆ ಅವರಲ್ಲಿ ಸಂಸ್ಕಾರ ಮತ್ತು ಭಾಷಾ ಜ್ಞಾನದ ಕೊರತೆ ಉಂಟಾಗಬಹುದು, ಪೋಷಕರು ಮಕ್ಕಳಿಗೆ ದಿನನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಬೇಕು, ಮಕ್ಕಳ ಸಾಹಿತ್ಯವು ಅವರ ಸುಪ್ತ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಪಾಲಕರು ತಮ್ಮ ಮಕ್ಕಳಿಗೆ ಉಡುಗೊರೆಯಾಗಿ ಮೊಬೈಲ್ ನೀಡುವ ಬದಲು ಉತ್ತಮ ಪುಸ್ತಕಗಳನ್ನು ನೀಡಿದರೆ ಅವರ ಭವಿಷ್ಯಕ್ಕೆ ಅಡಿಪಾಯ ಹಾಕಿದಂತಾಗುತ್ತದೆ. ಜ್ಞಾನ ಎಂಬುದು ನಿರಂತರವಾಗಿ ಹರಿಯುವ ನದಿ ಇದ್ದಂತೆ, ಅದನ್ನು ಪುಸ್ತಕಗಳ ಮೂಲಕ ಪಡೆದುಕೊಳ್ಳೋಣ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ ‘ ಮಕ್ಕಳ ಸಾಹಿತ್ಯದ ಎಲ್ಲಾ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವೆ, ಮಕ್ಕಳ ಸಂಗಮದ ಕಾರ್ಯಗಳಿಗೆ ಪ್ರತಿವರ್ಷ ೨೫ ಸಾವಿರೂ ರೂ. ನೀಡುವೆ, ಮಕ್ಕಳ ಭವನ ನಿರ್ಮಾಣ ಮಾಡುವದಕ್ಕೂ ಆರ್ಥಿಕ ಸಹಾಯ ಮಾಡುವದಾಗಿ ಹೇಳಿದರು.
ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿದರು. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಬಿ.ಎಂ.ಪಾಟೀಲ, ಸಮ್ಮೇಳನದ ರೂವಾರಿ ಹ.ಮ.ಪೂಜಾರ ಮೊದಲಾದವರು ಮಾತನಾಡಿದರು. ಜಿಲ್ಲಾ ಮಕ್ಕಳಸಾಹಿತ್ಯ ಸಂಗಮದ ಜಿಲ್ಲಾ ಅಧ್ಯಕ್ಷ ಎ.ಆರ್.ಹೆಗ್ಗನದೊಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಿಪುತ್ರ ಕಿರನಳ್ಳಿ ಸ್ವಾಗತಿಸಿದರು. ಪ್ರಾಚಾರ್ಯ ರಮೇಶ ಗಂಗನಳ್ಳಿ ವಂದಿಸಿದರು.
ಅದ್ದೂರಿ ಮೆರವಣಿಗೆ
ಎಲ್ಲೆಲ್ಲೋ ಮಕ್ಕಳ ಕಲರವ ಕನ್ನಡಾಂಬೆಗೆ ಜೈ
ಪಟ್ಟಣದ ತುಂಬೆಲ್ಲ ಕನ್ನಡಾಂಬೆಯ ಜೈ ಘೋಷ… ಎಲ್ಲೆಲ್ಲೂ ಮಕ್ಕಳ ಕಲರವ… ಇದು ಕಂಡುಬAದಿದ್ದು ಆಲಮೇಲ ಪಟ್ಟಣ ದಲ್ಲಿ ಹಮ್ಮಿಕೊಂಡಿರುವ ೧೨ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಪಟ್ಪಣ ಎ.ಕೆ. ನಂದಿ ಪ್ರೌಢಶಾಲೆಯ ಆವರಣದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಮಕ್ಕಳ ಸಾಹಿತಿ ಬಿ. ಆರ್. ನಾಡಗೌಡ ಅವರ ಸಾರೋಟದ ಮೆರವಣಿಗೆಗೆ ಚಾಲನೆ ಕಾರ್ಯಕ್ರಮದ ಸಾನಿಧ್ಯವನ್ನು ಸಂಗನಬಸವ ಶಿವಾಚಾರ್ಯರು ಅರ್ಜುಣಗಿ ಹಿರೇಮಠ ಆಲಮೇಲ, ಶ್ರೀಶೈಲಯ್ಯ ಸ್ವಾಮಿಗಳು ಅಳ್ಳೊಳ್ಳಿ ಮಠ, ಕೆ ಪಿ ಆರ್ ಶುಗರ್ಸ್ ಲಿ. ನ ಆಡಳಿತ ಅಧಿಕಾರಿ ಪಾರ್ಥಿಬನ್ ಮೆರವಣಿಗೆಗೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಮಹಿಬೂಬ ಮಸಳಿ ಮೆರವಣಿಗೆಗೆ ಚಾಲನೆ ನೀಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕಗೌಡ ಕೊಳಾರಿ, ಪ್ರಭು ವಾಲಿಕಾರ, ರಮೇಶ ಬಂಟನೂರ, ಬಸವರಾಜ ಹೂಗಾರ, ಶಿವಮೂರ್ತಿ ಕಾಟಕರ ಸೇರಿದಂತೆ ಅನೇಕರಿದ್ದರು.
























