
ಹುಳಿಯಾರು, ಡಿ. ೨೦- ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವನೆ, ವ್ಯವಹಾರಿಕ ಜೀವನ ನಿರ್ವಹಣೆ ಮಹತ್ವ ತಿಳಿಸುವ ಉದ್ದೇಶದಿಂದ ಹುಳಿಯಾರಿನ ಶ್ರೀ ಶಾರದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಂದ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು.
ಓದು ಆಟ-ಪಾಠಕ್ಕೆ ಮೀಸಲಾಗಿದ್ದ ಶಾಲಾ ಆವರಣ ಸಂತೆಯ ರೀತಿ ಮಾರ್ಪಾಡಾಗಿತ್ತು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ವಿವಿಧ ಬಗೆ ಬಗೆಯ ತಾಜಾ ತರಕಾರಿ, ಹೂವು, ಸೊಪ್ಪು, ಹಣ್ಣು-ಹಂಪಲು ಹಾಗೂ ತಿಂಡಿ ತಿನ್ನಿಸುಗಳು ಸಂತೆಯಲ್ಲಿದ್ದವು. ಮೊದಲೇ ಹಳ್ಳಿ ಮಕ್ಕಳಾದ್ದರಿಂದ ಪೈಪೋಟಿಗೆ ಬಿದ್ದವರಂತೆ ಭರ್ಜರಿ ವ್ಯಾಪಾರ ಮಾಡಿ ಓದಕ್ಕೂ ಸೈ, ವ್ಯಾಪಾರಕ್ಕೂ ಜೈ ಎನ್ನಿಸಿಕೊಂಡರು.
ಎಲ್‌ಕೆಜಿ, ಯುಕೆಜಿ ಮಕ್ಕಳ ವ್ಯಾಪಾರಕ್ಕೆ ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದರು. ವ್ಯಾಪಾರ ಮಾಡುವ ಕೌಶಲ್ಯ ಹೇಳಿಕೊಟ್ಟರು, ಚಿಲ್ಲರೆ ಕೊಡುವ ಲೆಕ್ಕಚಾರ ಕಲಿಸಿದರು. ಒಟ್ಟಿನಲ್ಲಿ ಶಾಲೆಯ ಎಲ್ಲ ಮಕ್ಕಳಿಗೂ ಸಂತೆ ಮೇಳ ಹೊಸ ಕಲೆ ಕಲಿಸಿದಂತಿತ್ತು. ಈ ಮೇಳದಲ್ಲಿ ಶಿಕ್ಷಕರು, ಪೋಷಕರೇ ಗ್ರಾಹಕರಾಗಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸು, ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಮಾರಾಟ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಎಂ.ಎಸ್.ಗೌರಮ್ಮ, ಮುಖ್ಯ ಶಿಕ್ಷಕರಾದ ಎಸ್.ಹೇಮಂತ್, ನಿರ್ದೇಶಕರಾದ ಗಗನ ಎಸ್. ಕುಮಾರ್, ಶಿಕ್ಷಕರುಗಳಾದ ಜೆ.ಎಂ.ಶಿಲ್ಪ, ಜಿ.ಲಕ್ಷ್ಮೀ, ಬೀ.ಬಿ.ಕುತೇಜ್, ಬೀ.ಬಿ.ಫಾತೀಮಾ, ಎಚ್.ವನಜ, ಪ್ರಭಾಮಣಿ, ಎಸ್.ನಿರ್ಮಲ, ಚೈತ್ರ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ಕೌಶಲ್ಯವನ್ನು ಬೆಳೆಸಲು ಮಕ್ಕಳ ಸಂತೆ ಆಯೋಜಿಸಲಾಗಿತ್ತು.
ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಕ್ಕಳೂ ಸಹ ಲವಲವಿಕೆಯಿಂದ ಪಾಲ್ಗೊಂಡು ಶಾಲೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಸಿದ್ದರು.

























