ಶಾಲೆಗಳತ್ತ ಹೆಜ್ಜೆ ಹಾಕಿದ ಚಿಣ್ಣರು

ಮಾಲೂರು, ಮೇ.೩೦- ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಗುರುವಾರ ದಿಂದ ಪುನರಾರಂಭಗೊಂಡಿದ್ದು, ಬೆಸಿಗೆ ರಜೆಯ ಖುಷಿಯಲ್ಲಿದ್ದ ಮಕ್ಕಳು ಶಾಲೆಗಳತ್ತ ಹೆಜ್ಜೆಹಾಕಿದರು. ಬೇಸಿಗೆ ರಜೆ ಬಳಿಕ ಆರಂಭವಾಗುತ್ತಿರುವ ಸರ್ಕಾರಿ ಶಾಲೆಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಸ್ವಾಗತಿಸಲಾಯಿತು.


೨೦೨೫-೨೬ನೇ ಶೈಕ್ಷಣಿ ವರ್ಷದ ಮೊದಲ ದಿನವಾದ ಗುರುವಾರ ಶಾಲೆಗಳಲ್ಲಿ ಸಿಹಿಯೂಟ ಸಿದ್ಧಪಡಿಸಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸಿಹಿಯೂಟ ಬಡಿಸಲಾಯಿತು. ಕಳೆದ ಒಂದೂವರೆ ತಿಂಗಳಿನಿಂದ ರಜೆಯ ಋಷಿಯಲ್ಲಿದ್ದ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದೊಂದಿಗೆ ಹೆಗಲಿಗೆ ಶಾಲಾಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಕಾರಣ ಶಾಲೆಗಳನ್ನು ಸ್ವಚ್ಛಗೊಳಿಸಿ ಬಾಳೆಕಂದು, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ಹಬ್ಬದ ರೀತಿಯಲ್ಲಿ ನಿರ್ಮಿಸಲಾಗಿತ್ತು. ಶಾಲೆಗಳು ಸರ್ವಾಲಂಕೃತಗೊಂಡಿರುವುದನ್ನು ಮಕ್ಕಳು ನೋಡಿ ಖಷಿಯಿಂದಲೇ ಶಾಲಾ ಕೊಠಡಿಗಳಿಗೆ ತೆರಳಿದರು. ಕೆಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚಿ, ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.


ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯರಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಕುಂಬಾರಪೇಟೆ ಮಾಸ್ತಿ ರಸ್ತೆಯಲ್ಲಿರುವ ಲೋಕೋಪಯೋಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಶಿವಾರ ಸರ್ಕಾರಿ ಪ್ರೌಢಶಾಲೆ, ಅರಳೇರಿ, ಮಾಸ್ತಿ, ಲಕ್ಕೂರು ಚಿಕ್ಕತಿರುಪತಿ ಸೇರಿದಂತೆ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣದೊಂದಿಗೆ ಶಾಲೆಗಳನ್ನು ಪುನರಾರಂಭ ಮಾಡಲಾಯಿತು.
೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ತಾಲೂಕು ಮಟ್ಟದಲ್ಲಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎಚ್.ಎಸ್. ಚಂದ್ರಕಲಾ ಅವರು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿಯನ್ನು ಹಂಚುವುದರ ಮುಖಾಂತರ ಉಚಿತ ಪಠ್ಯಪುಸ್ತಕಗಳನ್ನು ಉಚಿತ ಸಮವಸ್ತ್ರವನ್ನು ವಿತರಿಸಿದರು. ಮಕ್ಕಳಿಗೆ ಸಿಹಿತಿಂಡಿಯ ವ್ಯವಸ್ಥೆಯನ್ನು ಮಾಡಲಾಯಿತು. ಈ ದಿನ ಮಕ್ಕಳು ಬಹಳ ಸಂತೋಷದಿಂದ ಶಾಲೆಗೆ ಆಗಮಿಸಿದರು ಅವರನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.


ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ಚಂದ್ರಕಲಾ ಮಾತನಾಡಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆಯನ್ನು ಮಾಡಿಕೊಂಡು ತಳಿರು ತೋರಣಗಳಿಂದ ಶಾಲಾ ಕೊಠಡಿ ಗಳು ಮತ್ತು ಆವರಣವನ್ನು ಅಲಂಕಾರ ಮಾಡಿ ಶಾಲೆಗೆ ಬರುವ ಮಕ್ಕಳನ್ನು ಆಹ್ವಾನಿಸುವ ವ್ಯವಸ್ಥೆಯನ್ನು ಶಾಲಾ ಶಿಕ್ಷಕರು ಮಾಡಿಕೊಂಡಿದ್ದಾರೆ. ಜೊತೆಗೆ ಅಕ್ಷರ ದಾಸೋಹಕ್ಕೆ ಸಂಬಂಧಪಟ್ಟಂತಹ ಎಲ್ಲ ದಾಸ್ತಾನು ಸ್ವಚ್ಛವಾಗಿದೆ .ಇದರ ಬಗ್ಗೆ ಪರಿಶೀಲಿಸಿ ಬಳಕೆ ಮಾಡಲು ಸೂಚನೆಯನ್ನು ನೀಡಲಾಗಿದೆ. ಶಾಲಾ ಆವರಣದಲ್ಲಿರುವ ನೀರಿನ ಸಂಪು ಮತ್ತು ಟ್ಯಾಂಕ್ಗಳನ್ನು ಸ್ವಚ್ಛತೆ ಮಾಡಿ ಆ ನೀರನ್ನು ಬಳಕೆ ಮಾಡಲು ತಿಳಿಸಲಾಗಿದೆ. ೨೦೨೫-೨೬ ನೇ ಸಾಲಿನ ಸೇತುಬಂಧ ಕಾರ್ಯಕ್ರಮದಲ್ಲಿ ಎಲ್ಲ ಶಾಲೆಗಳಲ್ಲಿ ಪೂರ್ವಸಿದ್ಧತೆ ಮತ್ತು ಸಾಮರ್ಥ್ಯಗಳ ಅನುಗುಣವಾಗಿ ಸಾಮರ್ಥ್ಯ ಚಟುವಟಿಕೆಗಳನ್ನು ನಡೆಸಲು ಸೂಚಿಸಲಾಗಿದೆ


ಜೂನ್ ೨ರಿಂದ ಜೂನ್೧೫ರವರೆಗೆ ಮಿಂಚಿನ ಸಂಚಾರ ಅಡಿಯಲ್ಲಿ ಕ್ಷೇತ್ರ ಸಿಬ್ಬಂದಿ ಮತ್ತು ಇಲಾಖಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ದಾಖಲೆಗಳನ್ನು ಸ್ವಚ್ಛತೆಯನ್ನು ಅಕ್ಷರ ದಾಸೋಹ ವ್ಯವಸ್ಥೆಯನ್ನು ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ. ಶಿಕ್ಷಕರಿಗೆ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮತ್ತು ಎಲ್ಲ ಸಿಬ್ಬಂದಿಗೆ ಅಡುಗೆ ಸಿಬ್ಬಂದಿಗೆ ಶುಭಕೋರಿದರು
ಈ ಸಂದರ್ಭದಲ್ಲಿ ಸಿಆರ್‌ಪಿ ನಾಗರಾಜ್, ಮುಖ್ಯ ಶಿಕ್ಷಕಿ ಎಂ.ಎನ್. ಮಂಜುಳಾ ಶಿಕ್ಷಕರಾದ ನಾರಾಯಣಸ್ವಾಮಿ, ನಾರಾಯಣಪ್ಪ, ಪದ್ಮ, ವಿಜಯಕುಮಾರ್, ವೀಣ, ಮಂಜುನಾಥ್, ಹಾಜರಿದ್ದರು.