Home ಜಿಲ್ಲೆ ಮಕ್ಕಳು ಮೊಬೈಲ್ ಬಿಟ್ಟು, ಪುಸ್ತಕವನ್ನು ಹಿಡಿಯಬೇಕು: ಸುರೇಶ್ ಚನಶೆಟ್ಟಿ

ಮಕ್ಕಳು ಮೊಬೈಲ್ ಬಿಟ್ಟು, ಪುಸ್ತಕವನ್ನು ಹಿಡಿಯಬೇಕು: ಸುರೇಶ್ ಚನಶೆಟ್ಟಿ

ಬೀದರ:ಫೆ.20:ನಿವೇದಿತಾ ಹೂಗಾರ ವ್ಯಕ್ತಿತ್ವ ವಿಕಾಸನ ಟ್ರಸ್ಟ್ ವತಿಯಿಂದ ನಿವೇದಿತಾ ಹೂಗಾರ ಅವರ 21ನೇ ವರ್ಷದ ಜನ್ಮದಿನದ ಸ್ಮರಣಾರ್ಥ “ಚುಕ್ಕಿ” ಕೃತಿಯ ದ್ವಿತೀಯ ಮುದ್ರಣ ಬಿಡುಗಡೆ ಹಾಗೂ ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ನಗರದ ನೌಬಾದ್‍ನ ರಾಘವೇಂದ್ರ ಕಾಲೋನಿಯ ನಿವೇದಿತಾ ಹೂಗಾರ ಟ್ರೈನರ್ಸ್ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ಮಾತನಾಡಿ, ಮಕ್ಕಳು ಮೊಬೈಲ್‍ನ ಮಾಯೆಗೆ ಒಳಗಾಗುತ್ತಿರುವುದು ಆತಂಕಕಾರಿ. ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಬಿ.ಕೆ ಜ್ಯೋತಿ ಬೆಹೇನ್ ಜಿ ಅವರು ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ಸಂಸ್ಕಾರ, ಧ್ಯಾನ, ತಾಳ್ಮೆ ಮತ್ತು ಸಹನೆಯನ್ನು ಕಲಿಸಿಕೊಡಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಮತಿ ಶ್ರೀದೇವಿ ಹೂಗಾರ, ಗುರಿ ಸಾಧನೆಗೆ ನಿರಂತರ ಪ್ರಯತ್ನ ಮುಖ್ಯವಾಗಿದ್ದು, ನಿಂದಕರ ಮಾತಿಗೆ ಬೆಲೆ ಕೊಡಬಾರದು ಎಂದು ಹೇಳಿದರು. “ಕಾಲಿನ ಕೆಳಗಿನ ಬೆಂಕಿಗಿಂತ ಕಣ್ಣ ಮುಂದೆ ಇರುವ ಬೆಳಕು ಮುಖ್ಯ” ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀಮತಿ ಹೆಚ್. ಮಂಜುಳ ಅವರು “ಚುಕ್ಕಿ” ಕೃತಿಯನ್ನು ಬಿಡುಗಡೆ ಮಾಡಿದರು. ಕು. ವಿದ್ಯಾವತಿ ಎಸ್. ಹಿರೇಮಠ್ ಕೃತಿಯ ಪರಿಚಯ ಮಾಡಿಕೊಟ್ಟು, ಕರುಳಿನ ನೋವನ್ನು ಲೇಖನ ರೂಪದಲ್ಲಿ ವ್ಯಕ್ತಪಡಿಸಿ ಪುಸ್ತಕವಾಗಿ ತಂದಿರುವ ಕೃತಿಯೆಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಹಂಸಕವಿ, ಕೃಷ್ಣ ಪ್ರಶಾಂತ, ಕುಮಾರಿ ಅನನ್ಯ ಹೂಗಾರ ಹಾಗೂ ಜಗನ್ನಾಥ ಜೋಶಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ “ಚುಕ್ಕಿ ಸ್ಟಾರ್” ಪ್ರಶಸ್ತಿಯನ್ನು ಶಿವಶಂಕರ ಟೋಕರೆ, ಡಾ. ಶಿವಲಿಂಗ ಹೇಡೆ, ಶ್ರೀಮತಿ ರಾಧಾ ಭಾಸ್ಕರ್, ಡಾ. ಶ್ರೇಯಾ ಮಹಿಂದ್ರಕರ್ ಮತ್ತು ಸಂಗಮೇಶ್ವರ ಜಾಂತೆ ಅವರಿಗೆ ನೀಡಿ ಗೌರವಿಸಲಾಯಿತು.

ಪರಿಣಿತ ಮಕ್ಕಳಿಗೆ ನಿವೇದಿತಾ ಹೂಗಾರ ಚುಕ್ಕಿ ಪ್ರಶಸ್ತಿಯನ್ನು ಅಮುಕ್ತ ಮೌಲ್ಯ ಹೇಡೆ, ತೇಜ ಜೋಶಿ (ಧಾರವಾಡ), ಅನನ್ಯ ಸಂಗೊಳ್ಳಿ, ಭಾರ್ಗವಿ ಕುಲಕರ್ಣಿ, ಭರತ್ ಕುಮಾರ ಹಾಗೂ ನಾಟ್ಯ ಅವರಿಗೆ ಪ್ರಧಾನ ಮಾಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತಕ ಮತ್ತು ಪೆನ್ನುಗಳನ್ನು ಕಾಣಿಕೆಯಾಗಿ ವಿತರಿಸಲಾಯಿತು.

ಕಿವಿ ಕೇಳಿಸದ ಹಾಗೂ ಮಾತು ಬಾರದ ವಿಶೇಷ ಮಕ್ಕಳಿಂದ ನೃತ್ಯ ಪ್ರದರ್ಶನವೂ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ನಿವೇದಿತಾ ಸ್ಮರಣಾರ್ಥ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಪ್ಪತ್ತಕ್ಕೂ ಹೆಚ್ಚು ಸಾಧಕರಿಗೆ ಸನ್ಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹೂಗಾರ ಕುಟುಂಬದ ಸದಸ್ಯರು, ಟ್ರಸ್ಟ್ ಸದಸ್ಯರು, ಸಾಹಿತಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.