
ತುಮಕೂರು, ಜ. ೨- ಇಂದಿನ ಮಕ್ಕಳಿಗೆ ಸಾಹಿತ್ಯ ಸಂಸ್ಕೃತಿ ಕಲಿಸುವ ಅಗತ್ಯವಿದೆ. ಮೊಬೈಲ್ ಲೋಕದಿಂದ ಪುಸ್ತಕ ಲೋಕಕ್ಕೆ ತಂದು ಜೀವನದ ಮೌಲ್ಯಗಳನ್ನು ಕಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಕರೆ ನೀಡಿದರು.
ನಗರದಲ್ಲಿ ನಡೆದ ೧೭ನೇ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಿ ಮೂಲಭೂತ ಸೌಕರ್ಯ ಹೆಚ್ಚಿಸಿದರೆ ಮಾತ್ರ ಶಾಲೆಗಳು ಉಳಿಯುತ್ತವೆ. ಇಲ್ಲದಿದ್ದರೆ ಕನ್ನಡ ಕಲಿಯುವ ಮಕ್ಕಳು ಪಟ್ಟಣಗಳಿಗೆ ಹೋಗಿ ಆಂಗ್ಲ ಮಾಧ್ಯಮ ಕಲಿಯುತ್ತಾರೆ. ಸರ್ಕಾರಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಚರ್ಚೆಯಾಗಬೇಕು. ಮಕ್ಕಳೆ ಮಾತನಾಡುವಂತಾಗಬೇಕು. ಈ ವರ್ಷದ ಸಮ್ಮೇಳನದಲ್ಲಿ ಮಕ್ಕಳ ವಿಚಾರಗೋಷ್ಠಿ ಏರ್ಪಡಿಸಿ ಮಕ್ಕಳಿಗೆ ಅವಕಾಶ ಕಲ್ಪಿಸಿರುವುದು ಸಂತೋಷ ತಂದಿದೆ. ಮುಂದಿನ ಸಮ್ಮೇಳನಗಳಲ್ಲೂ ಇಂತಹ ಪ್ರಯತ್ನ ಮುಂದುವರಿಯಲಿ ಎಂದು ಆಶಿಸಿದರು.
ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿದ ಜಿಲ್ಲಾಡಳಿತಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಕೆ.ಎಸ್.ತೇಜಸ್ವಿ, ಜ್ಯೋತಿಪ್ರಕಾಶ್, ಅಜಯ್, ಯೋಗೀಶ್, ಚಿಕ್ಕಬೆಳ್ಳಾವಿ ಶಿವಕುಮಾರ್, ಷಡಕ್ಷರಿ, ಆದಿತ್ಯದಾಸ್ ಮತ್ತಿತರರು ಭಾಗವಹಿಸಿದ್ದರು.


























