ಭಾಷೆ ಪ್ರಜ್ಞೆ, ಜಾನಪದಗಳ ಅರಿವು ಮಕ್ಕಳಿಗೆ ಅಗತ್ಯವಿದೆ

ಕೋಲಾರ,ಡಿ.೬: ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರ ಶಿವಗಂಗೆಯಲ್ಲಿ ಡಿ,೪ ರಂದು ೨೨೪ ನೇ ಹುಣ್ಣಿಮೆ ಹಾಡು ಸಲುವಾಗಿ ರಂಗಗೀತೆಗಳ ಸಂಭ್ರಮ, ಅತಿಥಿಗಳ ಮಾತು, ನಾಟಕ ಪ್ರದರ್ಶನ ನಡೆಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ಇಂಗ್ಲೀಷ್ ಮುಖ್ಯಸ್ಥರಾದ ಗೌರಿಪ್ರಿಯ ಗಾಂವಕರ್ ಭಾಗವಹಿಸಿದ್ದರು. ರಂಗಗೀತೆಗಳ ಗಾಯನ ಆಲಿಸಿಕೊಂಡ ಅವರು, ಪ್ರತಿ ಹಾಡಿನ ಸಾಹಿತ್ಯದಲ್ಲಿ ನಮ್ಮ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದು ಹೇಳಿದರು.


ಬೆಂಗಳೂರಿನಂತಹ ನಗರ ಪ್ರದೇಶದ ಮಕ್ಕಳಿಗೆ ಇದೆಲ್ಲಾ ಅರ್ಥವಾಗುತ್ತಾ? ಎಂದು ಪ್ರಶ್ನಿಸಿದ ಅವರು ಇವುಗಳಿಂದ ನಾವು ನಮ್ಮ ಮಕ್ಕಳಿಗೆ ಏನನ್ನು ಕಲಿಸಬೇಕು ಏನು ಕಲಿಸಬಾರದು ಎನ್ನುವುದು ತಿಳಿಯುತ್ತದೆ. ಭಾಷೆಯ ವಿಚಾರಕ್ಕೆ ಬಂದಾಗ ಪ್ರದೇಶದಿಂದ ಪ್ರದೇಶಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಅದನ್ನು ಅರ್ಥೈಸಿಕೊಳ್ಳುವ ಭಾಷಾ ಪ್ರಜ್ಞೆ ಮಕ್ಕಳಿಗೆ ಅಗತ್ಯವಿದೆ. ಆಗ ಜಾನಪದ ಕಲೆಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ತಿಳಿಸಿದರು.


ಆದಿಮ ೨೨೪ ಹುಣ್ಣಿಮೆ ಹಾಡುಗಳನ್ನು ಆಚರಿಸಿಕೊಂಡು ಬಂದಿದೆ. ಆದಿಮದ ಹುಟ್ಟಿಕೊಂಡ ಬಗೆ, ಆಶಯಗಳು, ಉದ್ದೇಶಗಳು ಕುರಿತು ಹೇಳಿದ್ದನ್ನು ಕೇಳಿದಾಗ ಅಚ್ಚರಿ ಆಯಿತು. ಇಂತಹ ಕೇಂದ್ರಗಳು ಇವತ್ತಿನ ಯುವ ಪೀಳಿಗೆಗೆ, ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ ಅನ್ನಿಸಿತು. ಎಲ್ಲರೂ ಕೂಡಿ ಇಂತಹ ಕೇಂದ್ರ ಇಲ್ಲಿ ಬಹುದೊಡ್ಡ ಕೊಡುಗೆಯಾಗಿ ನಿರ್ಮಿಸಿ ಕೊಟ್ಟಿದ್ದಾರೆ. ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆಯೆಂದರು.
ಸುಗಟೂರು ಗ್ರಾಮಪಂಚಾಯಿತಿ ಅಧ್ಯಕ್ಷ ಎಸ್. ಭೂಪತಿಗೌಡ ಅವರು ರಸ್ತೆ ಬದಿಗಳಲ್ಲಿ ನೆಟ್ಟ ೩೮೫ ಆಲದ ಮರಗಳು ಇವತ್ತು ಹೆಮ್ಮರಗಳಾಗಿ ಬೆಳೆದಿವೆ. ಹಾಗೆಯೇ ಸುಮಾರು ಎಂಟು ಸಾವಿರ ಮರಗಳನ್ನು ನೆಟ್ಟು ಪೋಷಿಸಿ ಪರಿಸರವನ್ನು ಕಾಪಾಡುವಲ್ಲಿ ಜೀವಮಾನ ಶ್ರಮಿಸಿದ್ದಾರೆ. ಆದ್ದರಿಂದ ಅವರಿಗೆ ಅನೇಕ ಪ್ರಶಸ್ತಿ ಗೌರವ ಸನ್ಮಾನಗಳು ದೊರೆತಿವೆ. ಅವರ ಹೆಸರಲ್ಲಿ ನಡೆಯುತ್ತಿರುವ ಇವತ್ತಿನ ಹುಣ್ಣಿಮೆ ಹಾಡು ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಅವಿಸ್ಮರಣೀಯ ಎಂದರು.


ಆದಿಮ ಕೇಂದ್ರದ ಉಪಾಧ್ಯಕ್ಷ ಎಂ.ಮಾಕೊಂಡೇಯ ಮಾತನಾಡಿ, ಶಿಬಿರಕ್ಕೆ ಬಂದು ಇಲ್ಲಿ ಕಲಿತು ಅವರಲ್ಲಿದ್ದ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಹೀಗೆ ಅನೇಕ ಪ್ರತಿಭೆಗೆಳನ್ನು ಆದಿಮ ರೂಪಿಸಿದೆ. ಅವರೀಗ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ ಎಂದರು.


ಮಹಾಂತೇಶ ನವಲಕಲ್ ಅವರ ಕಥೆಯ ಆಧಾರಿತ ನಾಟಕ ಹಿಲಿಯೋಥಿಸ್ ಬಹುರಾಷ್ಟ್ರೀಯ ಕ್ರಿಮಿನಾಶಕ ಕಂಪನಿಗಳು ರೈತರ ಬದುಕನ್ನು ನಾಶ ಮಾಡಲು ಹೊರಟಿರುವ ಕ್ರೌರ್ಯ, ಮೋಸದ ಪ್ರಪಂಚವನ್ನು ತೆರೆದಿಡುವ ಮಹಾಂತೇಶ ನವಲಕಲ್ ಅವರ ಭಾರತ ಭಾಗ್ಯವಿದಾತ ಎನ್ನುವ ಕತೆ. ಮಾರುಕಟ್ಟೆ ನಡೆಸುತ್ತಿರುವ ಮೌನ ಕೊಲೆಗಳ ವಿವರವನ್ನು ಹೇಳುತ್ತದೆ. ಜಾಗತೀಕರಣ ಮತ್ತು ಅದು ರೂಪಿಸುತ್ತಿರುವ ಮಾರುಕಟ್ಟೆಯ ಆಮಿಷೆಗಳಿಗೆ ಬಲಿಯಾದ ರೈತರನ್ನು ಅಪೋಷಣೆ ತೆಗೆದುಕೊಳ್ಳುತ್ತಿರುವ ಅದೃಶ್ಯ ವ್ಯಾಪಾರ ಜಗತ್ತಿನ ದೃಶ್ಯಗಳನ್ನು ಈ ನಾಟಕದಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ ಎಂದು ವಿವರಿಸಿದರು
ಇತ್ತೀಚೆಗೆ ಅಗಲಿದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಚಂದ್ರಶೇಖರ್ ಸೂರಪ್ಪಲ್ಲಿ ಅವರ ಕುರಿತು ಹಾಡು ಹಾಡಿ ಸ್ಮರಿಸಿಕೊಳ್ಳಲಾಯಿತು.


ಪ್ರಾಂಶುಪಾಲ ಜಗದೀಶ್. ಆರ್ ಜಾಣಿ ಅವರ ಸಾರಥ್ಯದಲ್ಲಿ ಎನ್.ಎಸ್.ಎಸ್ ಶಿಬಿರಕ್ಕೆ ಬಂದಿದ್ದ ಬೆಂಗಳೂರಿನ ಜಯನಗರದ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ರಂಗಗೀತೆಗಳು ಹಾಗೂ ಆದಿಮ ಆಶಯ ಗೀತೆಯನ್ನು ಆದಿಮ ರಂಗಶಿಕ್ಷಣ ಕೇಂದ್ರ ವಿದ್ಯಾರ್ಥಿಗಳೊಂದಿಗೆ ಹಾಡಿದರು. ಕಾರ್ಯಕ್ರಮ ನಿರೂಪಣೆ ಕಾಳಿದಾಸ್, ಸ್ವಾಗತ ಶ್ರೀನಿವಾಸ್ ತುರಂಡಳ್ಳಿ, ವಂದನಾರ್ಪಣೆ ಪ್ರವೀಣ್ ಎನ್ ನಡೆಸಿಕೊಟ್ಟರು.