ಆರ್ಥಿಕವಾಗಿ ಬಡತನವಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ:ನ್ಯಾಯಧೀಶ ಶ್ರೀನಿವಾಸ ನವಲೆ

ಕಲಬುರಗಿ:ಜೂ.12:ಬಡವರು ಆರ್ಥಿಕ ಸಂಕಷ್ಟದಿಂದ ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಣ್ಣ ವಯಸ್ಸಿನ ಮಕ್ಕಳನ್ನು ಬಾಲ ಕಾರ್ಮಿಕರನ್ನು ಮಾಡುತ್ತಿರುವುದು ತುಂಬಾ ವಿಷಾದನಿಯ ಸಂಗತಿಯಾಗಿದ್ದು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಧೀಶರಾದ ಶ್ರೀನಿವಾಸ ನವಲೆ ಅವರು ಹೇಳಿದರು.
ಗುರುವಾರದಂದು ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ಸಹಾಯವಾಣಿ-1098/112 ವಿವಿಧ ಇಲಾಖೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ಅಪ್ಪ ಪಬ್ಲಿಕ ಶಾಲೆಯ ಸಭಾ ಮಂಟಪದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬಹಳಷ್ಟು ಆರ್ಥಿಕವಾಗಿ ಹಿಂದುಳಿದ ಜನರಿದ್ದು, ಬಡತನವಿರುವ ಪೋಷಕರು ತಮ್ಮ ಮಕ್ಕಳು ಶಿಕ್ಷಣವನ್ನು ಕಲಿಯುವಂತಹ ವಯಸ್ಸಿನಲ್ಲಿ ದುಡಿಯಲು ಹಚ್ಚುತ್ತಿರುವುದು ಅತ್ಯಂತ ವಿಷಾಧನಿಯ ಸಂಗತಿ ಎಂದರು, ಇಂತಹ ಪದ್ದತಿಯನ್ನು ನಿರ್ಮೂಲನೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

   ಬಾಲ ಕಾರ್ಮಿಕರ ಕುರಿತು ಅರಿವನ್ನು ಮೂಡಿಸುವ ಮುಖಾಂತರ ಜಿಲ್ಲೆಯನ್ನು ಸಂಪೂರ್ಣವಾಗಿ ಬಾಲ ಕಾರ್ಮಿಕ ಮುಕ್ತವಾಗಿ ಮಾಡಬೇಕು. ಈ ಹಿನ್ನಲೆಯಲ್ಲಿ ಸರ್ಕಾರ ಗುರುತಿಸಿರುವ ಹಾಗೂ ವಿಶೇಷ ಅಧಿಕಾರ ನೀಡಿರುವ 11 ಇಲಾಖೆಯ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಪ್ರಾಮಾಣಿಕವಾಗಿ ಪ್ರಯತ್ನಿಸಿ ಜಿಲ್ಲೆಯನ್ನು ಸಂಪೂರ್ಣವಾಗಿ ಬಾಲ ಕಾರ್ಮಿಕ ಮುಕ್ತ ಮಾಡುವಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. 
 ಸರ್ಕಾರ ಬಾಲ ಕಾರ್ಮಿಕತೆಯನ್ನು ಸಂಪೂರ್ಣವಾಗಿ ಮುಕ್ತವಾಗಿಸಲು 11 ಇಲಾಖೆಯ ಅಧಿಕಾರಿಗಳನ್ನು ಬಾಲ ಕಾರ್ಮಿಕರ ರಕ್ಷಣ ಘಟಕದ ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಿದೆ. ಎಂದು ಹೇಳಿದರು.
ಸಾರ್ವಜನಿಕರು ಬಾಲ ಕಾರ್ಮಿಕತೆ ಕುರಿತು ಮಾಹಿತಿಯನ್ನು ನೀಡಿದ್ದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲ ಕಾರ್ಮಿಕರನ್ನು ರಕ್ಷಿಸಿ ಮಾಲೀಕರ ವಿರುದ್ದ ಪ್ರಕರಣಗಳನ್ನು ದಾಖಲಿಸಿ ಕಟ್ಟು ನಿಟ್ಟಿನ ಕಾನೂನಿನ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದರು.
   ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ಜಿಲ್ಲೆಯಲ್ಲಿ 1770 ದಾಳಿಗಳನ್ನು ಮಾಡಿ 41 ಎಫ್‍ಐಆರ್‍ಗಳನ್ನು ದಾಖಲಿಸಿ 47 ಬಾಲ ಕಾರ್ಮಿಕರನ್ನು ರಕ್ಷಿಸಿ ಅವರಿಗೆ ಪುನರ್ವವಸತಿ ಕಲ್ಪಿಸಿ ಅವರ ಶಿಕ್ಷಣವನ್ನು ಮುಂದುವರೆಸಲು ಎಲ್ಲಾ ಅಧಿಕಾರಿಗಳ ಸಹಕಾರದೊಂದಿಗೆ ಅವಿರತವಾಗಿ ಶ್ರಮಿಸಿದ್ದೇವೆ ಎಂದು ಅವರು ಹೇಳಿದರು. 
    ಸುಮಾರು 15 ವರ್ಷಗಳ ಹಿಂದೆ ಶಿಕ್ಷಣವನ್ನು ಪಡೆಯಲು ಇಷ್ಟೊಂದು ಸೌಲಭ್ಯಗಳು ದೊರೆಯುತ್ತಿರಲ್ಲಿಲ್ಲ, ಪ್ರಸ್ತುತ್ತ ದಿನಗಳಲ್ಲಿ ಸರ್ಕಾರವು ಹಲವಾರು ಸವಲತ್ತುಗಳನ್ನು ನೀಡಿದರು ಬಹಳಷ್ಟು ಜನರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಇದಕ್ಕೆ ಕುಟುಂಬದ ಪೋಷಕರ ಅನಕ್ಷರತೆ ಮತ್ತು ಬಡತನ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.

  ಪ್ರಜ್ಞಾವಂತ ನಾಗರೀಕರು ತಮ್ಮ ಜವಬ್ದಾರಿಯನ್ನು ಅರಿತುಕೊಂಡು ಬಾಲ ಕಾರ್ಮಿಕತೆಯನ್ನು ಸಂಪೂರ್ಣವಾಗಿ ಮುಕ್ತವಾಗಿಸಲು ಅಧಿಕಾರಿಗಳಿಗೆ ಸಹಾಯ ಮಾಡಬೇಕು ಹಾಗೂ ದೂರುಗಳು ಬಂದ ತಕ್ಷಣ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಬಾಲ ಕಾರ್ಮಿಕರನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸಿ ಅವರ ಶಿಕ್ಷಣದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರತಿಯೊಬ್ಬ ಅಧಿಕಾರಿಗಳು ಜವಬ್ಧಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಮಾತನಾಡಿ ಪೋಷಕರು ತಮ್ಮ ಮಕ್ಕಳ ಉಜ್ವಲ  ಭವಿಷ್ಯಕ್ಕಾಗಿ ಶಿಕ್ಷಣವನ್ನು ಕೊಡಿಸಬೇಕು, ಕಲಬುರಗಿ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಪದವಿ ಪೂರ್ವ ಸೇರಿಸಿಕೊಂಡು 5 ಲಕ್ಷ 28 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 3228 ಶಾಲೆಗಳಿಗೆ 24000 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮೇ. 29 ರಂದು ಶಾಲಾ ಕಾಲೇಜುಗಳು ಆರಂಭವಾದರೂ ಕೇವಲ 45 ರಷ್ಟು ಪ್ರತಿಶತ ಹಾಜರಾಗುತ್ತಿದ್ದಾರೆ ಇನ್ನೂ ಶೇಕಡ. 55 ರಷ್ಟು ಪ್ರತಿಶತ ಶಾಲೆಯಿಂದ ಹೊರಗುಳಿದಿದ್ದಾರೆ ಆ ಕಾರಣದಿಂದ ಶಿಕ್ಷಕರು ಶಾಲೆಗಳಲ್ಲಿ ಪಾಠ ಭೋಧನೆ ಜೊತೆಗೆ ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡಬೇಕೆಂದು ಅವರು ತಿಳಿಸಿದರು.
    ಸಂಪನ್ಮೂಲ ವ್ಯಕ್ತಿಗಳಾದ ಕಾನೂನು ಪರಿವೀಕ್ಷಣಾಧಿಕಾರಿ  ಭರತೇಶ ಶೀಲವಂತ ಮಾತನಾಡಿ ಬಾಲಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ 1986 ರಲ್ಲಿ ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ತಂದು 14 ವರ್ಷದ ಒಳಗಿನ ಮಕ್ಕಳು ಅಪಾಯಕಾರಿ ಎನಿಸುವಂತಹ ಸ್ಥಳಗಳಲ್ಲಿ ಕಾರ್ಯನಿರ್ವಾಹಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ವಿರೋದ್ಧ ದಿನಾಚರಣೆ ಅಂಗವಾಗಿ ಪ್ರಮಾಣ ವಚನವನ್ನು ಬೋಧಿಸಿದರು.  
ಸೇಡಂ ತಾಲೂಕಿನ ಬಾಲಕ   ಕಳೆದ ಐದು ವರ್ಷ ಹಿಂದೆ ಬಾಲಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಬಾಲಕನನ್ನು ರಕ್ಷಸಿ ಮುಖ್ಯವಾಹಿನಿಗೆ ದಾಖಲಿಸಿ ಮಾಲಿಕನಿಂದ   ರೂ. 20000 ದಂಡ ವಿಧಿಸಿ ಪುನರ್ ವಸತಿ ನಿಧಿ ಜಮೆ ಮಾಡಿ ಜೊತೆಗೆ ರೂ.15715 ಸರ್ಕಾರ ವತಿಯಿಂದ ಜಮೆ ಮಾಡಿ  ಒಟ್ಟು 35715 ರೂ.ಗಳನ್ನು ಬಾಲಕನ ಶಿಕ್ಷಣಕ್ಕಾಗಿ ಚೆಕ್ ವಿತರಿಸಲಾಯಿತು. 
    ಇದೇ ಸಂದರ್ಭದಲ್ಲಿ ಬಾಲಕಾರ್ಮಿಕರ ರಕ್ಷಣೆಯಲ್ಲಿ ಸಹಕರಿಸಿದ ಪೋಲಿಸ್ ಇಲಾಖೆ ಶ್ರೀಮತಿ ನರ್ಮದಾ  ಡಾನ ಬಾಸ್ಕೋ ಶಾಲೆಯ ಪ್ರತಿನಿಧಿ ಫಾದರ್ ಕೋರಿಕೋಸ್, ಉತ್ತರ ಕ್ಷೇತ್ರಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ ಅವರನ್ನು ಸನಮಾನಿಸಲಾಯಿತು ಹಾಗೂ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
     ವೇದಿಕೆ ಮೇಲೆ ಜಿಲ್ಲಾ ಮಕ್ಕಳ ಸಮೀತಿಯ ಅಧ್ಯಕ್ಷರಾದ ವಿಶ್ವರಾಧ್ಯ ಇಜೇರಿ,   ಉಪ ಕಾರ್ಮಿಕ ಆಯುಕ್ತರಾದ ಡಾ|| ವೆಂಕಟೇಶ ಎ.ಶಿಂದಿಹಟ್ಟಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕಿ ಪ್ರೀತಿ ಚಂದ್ರಶೇಖರ  ದೊಡ್ಡಮನಿ,  ಆರ್.ಸಿ.ಹೆಚ್.ಅಧಿಕಾರಿ ಡಾ, ಸಿದ್ದು ಪಾಟೀಲ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುಳಾ ವಿ. ಪಾಟೀಲ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯದರ್ಶಿ ಶಿವಕುಮಾರ ರೇಷ್ಮೆ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕರು ವಿಠ್ಠಲ್ ಚಿಕಣಿ, ಉಪಸ್ಥತರಿದ್ದರು ಪೋಲಿಸ್ ಇಲಾಖೆ ಅಧಿಕಾರಿಗಳು, ಹಾಗೂ ಶಾಲಾ ಕಾಲೇಜಿನ ಮಕ್ಕಳ ಭಾಗವಹಿಸಿದ್ದರು.