ಗೋಡೆ ಕುಸಿದು ಮಗು ಸಾವು

ಬೆಂಗಳೂರು,ನ.೮- ಸಿಮೆಂಟ್ ಮಿಕ್ಸರ್ ಲಾರಿಗೆ ವಿದ್ಯುತ್ ತಂತಿ ತಗುಲಿ ಎಳೆದೊಯ್ದ ಪರಿಣಾಮ, ಮನೆಯ ಗೋಡೆ ಕುಸಿದು ಮಗು ಸಾವನ್ನಪ್ಪಿದ ಘಟನೆ ಹೆಚ್‌ಎಎಲ್‌ನ ಕುಂದಲಹಳ್ಳಿ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಕುಂದಲಹಳ್ಳಿ ಕಾಲೋನಿಯ ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ (೧ ವರ್ಷ ೮ ತಿಂಗಳು) ಎಂದು ಗುರುತಿಸಲಾಗಿದೆ. ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ ಸಿಮೆಂಟ್ ಮಿಕ್ಸರ್ ಲಾರಿಯು ರಾತ್ರಿ ಹೋಗುತ್ತಿತ್ತು. ಈ ವೇಳೆ ಮೇಲೆ ಹಾದು ಹೋಗಿರುವ ವೈರಿಂಗ್ ವಿದ್ಯುತ್ ತಂತಿ ಲಾರಿಗೆ ಸಿಲುಕಿಕೊಂಡಿದೆ.


ತಕ್ಷಣ ಸ್ಥಳೀಯರು ಕೂಗಿಕೊಂಡಿದ್ದಾರೆ. ಆದರೆ ಚಾಲಕ ಗಮನಿಸದೇ ಲಾರಿ ಚಲಾಯಿಸಿದ್ದರಿಂದ ವೈರಿಂಗ್ ಕಂಬ ಕಿತ್ತು ಬಂದಿದೆ. ಅಲ್ಲದೇ ಮನೆಯ ಗೋಡೆ ಕುಸಿದು ಆಟ ಆಡುತ್ತಿದ್ದ ಮಗುವಿನ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದೆ.

ಮಗುವಿನ ಶವವನ್ನು ಬೌರಿಂಗ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಮೃತ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಹೆಚ್‌ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಬಳಿಕ ಪರಾರಿಯಾಗಿರುವ ಲಾರಿ ಚಾಲಕ ಬಂಧನಕ್ಕೆ ಶೋಧ ನಡೆಸಲಾಗಿದೆ.