
ಬೀದರ, ಫೆ.20: ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ದೇಶಪ್ರೇಮ ಕೋಟ್ಯಾಂತರ ಭಾರತೀಯರಿಗೆ ಸ್ಫೂರ್ತಿಯಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಹೇಳಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಇತಿಹಾಸದಲ್ಲಿ ಅಪ್ರತಿಮ ವೀರ ಮತ್ತು ದಕ್ಷ ಆಡಳಿತಗಾರರಾಗಿ ಚಿರಸ್ಥಾಯಿಯಾಗಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವರಾಜ್ಯದ ಕನಸನ್ನು ಕಂಡು ಅದನ್ನು ನನಸು ಮಾಡಿದರು. ಶಿವಾಜಿ ಮಹಾರಾಜರು ಕೇವಲ ಯುದ್ಧವಲ್ಲದೆ, ಸ್ತ್ರೀಯರಿಗೆ ಗೌರವ ನೀಡುವುದು, ರೈತ ಹಿತರಕ್ಷಣೆ ಮತ್ತು ಸಮರ್ಥ ನೌಕಾಪಡೆಯನ್ನು ನಿರ್ಮಿಸುವ ಮೂಲಕ ಅವರು ಒಬ್ಬ ಜನಪರ ರಾಜನಾಗಿ ಗುರುತಿಸಿಕೊಂಡವರು. ಛತ್ರಪತಿ ಶಿವಾಜಿ ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿರಲಿಲ್ಲ ಅವರ ಸೈನ್ಯದಲ್ಲಿ ಸಾಕಷ್ಟು ಮುಸ್ಲಿಂರಿದ್ದರು ಆದರೆ ಅವರ ಇತಿಹಾಸವನ್ನು ತಪ್ಪಾಗಿ ಹೇಳಲಾಗುತ್ತಿದೆ ಅದರ ಸತ್ಯಂಶವನ್ನು ಹೊರತರುವ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ. ಮರಾಠ ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಭದ್ಧವಾಗಿದೆ ಎಂದರು.
ಬೀದರ ಸಂಸದರಾದ ಸಾಗರ ಖಂಡ್ರೆ ಅವರು ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಅನ್ಯಾಯ ಅತ್ಯಾಚಾರದ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸುತ್ತಿದ್ದರು. ಅವರಂತೆ ತಾವೇಲ್ಲರೂ ಸಮಾಜದಲ್ಲಿ ನಡೆಯುವ ಅನ್ಯಾಯ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಬೇಕು. ಮಹಪುರುಷರನ್ನು ಕೇವಲ ಜಯಂತಿ ಸೀಮಿತಗೊಳಿಸುವ ಕೆಲಸವಾಗುತ್ತಿದೆ, ಅವರ ತತ್ವಾರ್ದಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವಾಗಬೇಕಿದೆ. ಮರಾಠ ಸಮುದಾಯ ಭವನ ನಿರ್ಮಾಣಕ್ಕಾಗಿ 50 ಲಕ್ಷ ರೂ. ಗಳನ್ನು ಮಿಸಲಿಡಲಾಗಿದೆ ಮುಂದೆಯು ಸಮಾಜದ ಪರವಾಗಿ ನಿಲ್ಲುವುದಾಗಿ ಸಂಸದರು ಭರವಸೆ ನೀಡಿದರು.
ಇತಿಹಾಸಕಾರರು ಹಾಗೂ ಮರಾಠ ಸೇವಾ ಸಂಘ ಪುಣೆ ಮಹಾರಾಷ್ಟ್ರದ ಪ್ರಮುಖರಾದ ಗಂಗಾಧರ್ ಬನಬಾರೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರನ್ನು ಮರಾಠರಿಗೆ, ಹಿಂದೂ ಧರ್ಮಕ್ಕೆ ಸೀಮಿತಗೊಳಿಸಿ ಅನ್ಯ ಧರ್ಮದವರಿಗೆ ಮರಾಠಿಗರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಮಹಾಪುರುಷರನ್ನು ಒಂದು ಜಾತಿ, ಧರ್ಮದ ಹಣೆಪಟ್ಟಿ ಕಟ್ಟಬೇಡಿ, ಮಹಾಪುರಷರು ಈ ಸಮಾಜದ ಆಸ್ತಿ. ಶಿವಾಜಿ ಬಗ್ಗೆ ಶತ್ರುಗಳು ಸಹ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ ಅಂತಹ ಮಹಾನ್ ವ್ಯಕ್ತಿ ಶಿವಾಜಿ ಮಹಾರಾಜರಾಗಿದ್ದರು. ಕನ್ನಡ ಹಾಗೂ ಮರಾಠಿ ಭಾಷೆಯ ನಡುವೆ ನಡೆಯುತ್ತಿರುವ ಹೋರಾಟ ವ್ಯರ್ಥವಾದದ್ದು. ಶಿವಾಜಿ ಮಹಾರಾಜರು ಕರ್ನಾಟಕದ ಬೆಂಗಳೂರಿನಲ್ಲಿಯೇ ಪೆÇೀಷಕರಿಂದ ಸ್ವರಾಜ್ಯದ ಶಿಕ್ಷಣ ಪಡೆದಿದ್ದರೂ. ಕನ್ನಡರ ಹಾಗೂ ಮರಾಠಿಗರ ಮಧ್ಯ ಅವಿನಾಭಾವ ಸಂಬಂಧವಿದೆ ಎಂದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ನಗರದ ಶಿವಾಜಿ ವೃತ್ತದಿಂದ ಚಾಲನೆಗೊಂಡು ಭಗತ್ ಸಿಂಗ್ ವೃತ್ತ, ಬಸವವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗವಾಗಿ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಬೀದರ ನಗರ ಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಛತ್ರಪತಿ ಶಿವಾಜಿ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಘುನಾಥರಾವ್ ಜಾಧವ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.



























