ಎತ್ತಿನಹೊಳೆ ಹೆಸರಲ್ಲಿ ಮೋಸ, ಹೋರಾಟ ಅನಿವಾರ್‍ಯ

ಕೋಲಾರ,ಜು,೩-ಪಂಚ ನದಿಗಳು ಉಗಮವಾಗುವ ಐತಿಹಾಸಿಕ ನಂದಿ ಗಿರಿಧಾಮಕ್ಕೆ ಬಂದರೂ, ಯಾವುದೇ ವಿಶೇಷ ಘೋಷಣೆಗಳಿಲ್ಲದೆಯೇ ಸಿದ್ದರಾಮಯ್ಯನವರ ಇಂದಿನ ಸಚಿವ ಸಂಪುಟ ಸಭೆ ಮುಗಿಸಿರುವುದು ನಿರಾಶದಾಯಕವಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ.ಆರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುರಕ್ಷಿತ ಕುಡಿಯುವ ನೀರು ಪೂರೈಕೆ ಮತ್ತು ಕೃಷಿಗೆ ನೀರಾವರಿ ಭದ್ರತೆ ನಮ್ಮ ಸಾಂವಿಧಾನಿಕ ಹಕ್ಕು, ಎತ್ತಿನಹೊಳೆ ಹೆಸರಲ್ಲಿ ಮೋಸ, ವ್ಯಾಲಿಗಳ ಹೆಸರಲ್ಲಿ ವಂಚನೆ ಮುಂದುವರೆಯುತ್ತಿರುವುದು ಶೋಚನಿಯ ಸಂಗತಿಯಾಗಿದೆ.


ನೀರಿನಮೂಲಗಳೇ ನಾಶವಾಗಿ ನಮ್ಮ ಆರೋಗ್ಯ ಮತ್ತು ಆದಾಯಗಳು ಬುಡಮೇಲಾಗಿ ಸಾಮಾಜಿಕ ಅಭದ್ರತೆ ಕಾಡುತ್ತಿದ್ದರೂ, ಸ್ಪಂದಿಸದ ಸರ್ಕಾರವು ಬಯಲುಸೀಮೆಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ, ಸರ್ಕಾರವು ಸಂಪೂರ್ಣವಾಗಿ ಬರಪೀಡಿತ ಜಿಲ್ಲೆಗಳ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಸಂಪುಟ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


ತಾರತಮ್ಯ ಮಾಡುತ್ತಿರುವ ಸರ್ಕಾರದ ಮೇಲೆ ಭರವಸೆಯಿಟ್ಟು ಮತ್ತಷ್ಟು ಕಾಲ ಕಾಯಲು ಸಾಧ್ಯವಿಲ್ಲ, ಜಿಲ್ಲೆಗಳು ಸರ್ವನಾಶವಾಗುವ ಮೊದಲೇ ಎಚ್ಚರಗೊಳ್ಳುವಂತೆ ಜನರನ್ನು ಜಾಗೃತ ಗೊಳಿಸುತ್ತೇವೆ, ನಮ್ಮ ಮುಂದಿನ ಪೀಳಿಗೆಗಳ ಉಳಿವಿಗಾಗಿ ಉಗ್ರ ಹೋರಾಟ ಅನಿವಾರ್ಯವಾಗಿದೆ.