Home ಜಿಲ್ಲೆ ಮುದ್ದೇಬಿಹಾಳದಲ್ಲಿ ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳ ಚಾತುರ್ಮಾಸ ಆರಂಭ

ಮುದ್ದೇಬಿಹಾಳದಲ್ಲಿ ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳ ಚಾತುರ್ಮಾಸ ಆರಂಭ

ಸಂಜೆವಾಣಿ ವಾರ್ತೆ,
ಮುದ್ದೇಬಿಹಾಳ, ಜು.೧೦: ಕಣ್ವಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ಈ ವರ್ಷದ ಚಾತುರ್ಮಾಸ ಕಾರ್ಯಕ್ರಮವು ಮುದ್ದೇಬಿಹಾಳದ ಶ್ರೀ ಚಿದಂಬರ ದೇವಸ್ಥಾನದಲ್ಲಿ ಆರಂಭಗೊAಡಿದ್ದು, ಭಕ್ತರ ಸಕ್ರಿಯ ಭಾಗವಹಿಸುವಿಕೆಗೆ ಶ್ರೀಗಳು ಕರೆ ನೀಡಿದ್ದಾರೆ.
ಚಾತುರ್ಮಾಸದ ಅವಧಿಯಲ್ಲಿ ಪ್ರತಿದಿನ ವಿಶೇಷ ಪೂಜೆ, ಹಸ್ತೋದಕ ಸೇವೆ, ತೀರ್ಥಪ್ರಸಾದ, ಸಂಸ್ಥಾನ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಚಾತುರ್ಮಾಸವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಗಳು ಮನವಿ ಮಾಡಿದ್ದಾರೆ.
ಈ ಬಾರಿ ಚಾತುರ್ಮಾಸದ ಅಂಗವಾಗಿ ವಿದ್ವಾಂಸರು ಹಾಗೂ ಪಂಡಿತರ ಪ್ರವಚನಗಳು, ಸಂಗೀತ ಸೇವೆ, ಭಜನೆ, ಕೋಲಾಟ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಲು ಚಾತುರ್ಮಾಸ ಸಂಘಟನೆಯ ಪದಾಧಿಕಾರಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಸAಸ್ಥಾನ ಪೂಜೆ ಪ್ರತಿದಿನ ಸಾಂಗವಾಗಿ ನೆರವೇರುತ್ತಿದ್ದು, ಭಕ್ತರ ಆಗಮನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಠದ ಅಭಿವೃದ್ಧಿಗೆ ಭಕ್ತರು ನಿರಂತರ ಸಹಕಾರ ನೀಡಬೇಕು ಹಾಗೂ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧರ್ಮಕಾರ್ಯಕ್ಕೆ ಶೋಭೆ ತರಬೇಕು ಎಂದು ಶ್ರೀಗಳು ಕರೆ ನೀಡಿದರು. ಮಠದ ಕಾರ್ಯಾಧ್ಯಕ್ಷ ರಾಘವೇಂದ್ರ ಆಲಗೂರ ಹಾಗೂ ಅವರ ತಂಡದ ಸಹಕಾರವನ್ನು ಶ್ರೀಗಳು ಶ್ಲಾಘಿಸಿದರು.
ಇದೇ ವೇಳೆ ಹುಣಸಿಹೊಳೆಯ ಕಣ್ವಮಠದಲ್ಲಿ ಉಂಟಾಗಿದ್ದ ಕೆಲವು ಅನಾನುಕೂಲತೆಗಳನ್ನು ನಿವಾರಿಸಲು ಅನುಭವಿ ಪುರೋಹಿತರು ಹಾಗೂ ನುರಿತ ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಯುಗಾದಿಯಿಂದ ಪ್ರತಿದಿನ ಶ್ರೀ ವಿಠಲಕೃಷ್ಣನ ಪೂಜೆ, ನೈವೇದ್ಯ ಹಾಗೂ ಬೃಂದಾವನಸ್ಥ ಯತಿಗಳ ಆರಾಧನಾ ಮಹೋತ್ಸವಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಗುತ್ತಿದ್ದು, ಭಕ್ತರಿಗೆ ನಿತ್ಯ ತೀರ್ಥಪ್ರಸಾದದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ವಿದ್ಯಾಭಾಸ್ಕರ ತೀರ್ಥರ ೧೧ನೇ ಆರಾಧನಾ ಮಹೋತ್ಸವ ಜುಲೈ ೧೦ರಿಂದ ೧೩ರವರೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಆರಾಧನೆ ಹಾಗೂ ನಿತ್ಯಪೂಜಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಮಠದ ಕಾರ್ಯಾಧ್ಯಕ್ಷ ರಾಘವೇಂದ್ರ ಆಲಗೂರ ಮನವಿ ಮಾಡಿದ್ದಾರೆ.