Home ಜಿಲ್ಲೆ ಬೀದರ್‌ನಲ್ಲಿ ಚನ್ನಮ್ಮ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿ

ಬೀದರ್‌ನಲ್ಲಿ ಚನ್ನಮ್ಮ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿ

ಬೀದರ, ಜೂ.೩ : ಭಾರತ ದೇಶವು ಹಳ್ಳಿಗಳಿಂದ ಕೂಡಿದ ದೇಶವಾಗಿದೆ. ಇಂತಹ ಹಳ್ಳಿ ಕಲಾವಿದರ ಕಲೆ ಮತ್ತು ಸಾಹಿತ್ಯದಲ್ಲಿ ನಾಡಿನ ಪ್ರಜ್ಞೆ ಹಾಗೂ ಸಂಸ್ಕೃತಿಯ ಪರಂಪರೆ ಹಾಸುಹೊಕ್ಕಾಗಿದೆ. ಹೀಗಾಗಿ ದೇಶಿ ಸೊಗಡಿನ ಕಲೆಯನ್ನು ಉಳಿಸಿ ಬೆಳೆಸಿದ ನಿಜವಾದ ಕಲಾವಿದರೆಂದರೆ ಅದು ಜನಪದ ಕಲಾವಿದರು” ಎಂದು ಕನ್ನಡ ಜಾನಪದ ಪರಿಷತ್ ಅಕಾಡೆಮಿಯ ಮಹಿಳಾ ಸದಸ್ಯೆ ಮಂಗಲಾ ತಿಳಿಸಿದರು.
ಅವರು ಇತ್ತೀಚಿಗೆ ನಗರದ ಪ್ರತಾಪನಗರದ ಹನುಮಾನ್ ಮಂದಿರದ ಕಲ್ಯಾಣ ಮಂಟಪದಲ್ಲಿ ಚನ್ನಮ್ಮ ಕಲಾ ಸಾಹಿತ್ಯ ಸೇವಾ ಸಂಘ ಬೀದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಚನ್ನಮ್ಮನ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜನಪದ ಹಾಡಿನಲ್ಲಿ, ನರ್ತನದಲ್ಲಿ ಹಾಗೂ ನಾಟಕ ಪ್ರದರ್ಶನದಲ್ಲಿ ಇಂದಿನ ಕಲಾವಿದರು ಎಷ್ಟೇ ಪ್ರಜ್ಞಾವಂತರಾಗಿದ್ದರೂ ಕೂಡ, ಅಪ್ಪಟ ಜನಪದರ ಮುಂದೆ ಅವರ ಕಲೆ ಗೌಣವಾಗುತ್ತದೆ. ಇಂತಹ ಕಲಾ ಪರಂಪರೆಯನ್ನು ಮತ್ತು ನಿಜವಾದ ಜನಪದ ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಚನ್ನಮ್ಮ ಕಲಾ ಸಾಹಿತ್ಯ ಸೇವಾ ಸಂಘವು ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಅವರು ಶ್ಲಾಘಿಸಿದರು.
ಇದೇ ವೇಳೆ ಕಿತ್ತೂರು ರಾಣಿ ಚನ್ನಮ್ಮನವರ ವೀರತ್ವ ಹಾಗೂ ಆದರ್ಶಗಳನ್ನು ಸ್ಮರಿಸಿದ ಅವರು, ವೀರ ಮಹಿಳೆಯರ ಆದರ್ಶಗಳು ಇಂದಿನ ಎಲ್ಲಾ ಮಹಿಳೆಯರಲ್ಲೂ ಮೂಡಿಬರಬೇಕು. ಇಲಾಖೆಯ ಸಹಯೋಗದೊಂದಿಗೆ ಇಂತಹ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ. ಬೀದರ್‌ನ ಕಲಾವಿದರು ತಮ್ಮ ಅತ್ಯುತ್ತಮ ಕಲಾ ಪ್ರದರ್ಶನದ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯುವಂತಾಗಲಿ” ಎಂದು ಶುಭ ಹಾರೈಸಿದರು.
ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳಿAದ ಮೂಡಿಬಂದ ಪ್ರದರ್ಶನಗಳು ಪ್ರೇಕ್ಷಕರ ಮನ ಗೆದ್ದವು.
ಈ ಕಾರ್ಯಕ್ರಮದಲ್ಲಿ ರೇವಣಪ್ಪ ಮುಲಗೆ, ರಾಜಕುಮಾರ್ ಹುಮನಾಬಾದೆ, ಪ್ರಕಾಶ್ ಕುಲಕರ್ಣಿ, ಲಕ್ಷ್ಮಿ ಚಿಟ್ಟಾ, ಶಿವಕುಮಾರ್, ಮಾಣಿಕ, ರಾಜಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಾಹಾದೇವಿ ಅವರು ಎಲ್ಲರನ್ನೂ ಸ್ವಾಗತಿಸಿದರು, ಕೃಷ್ಣಾ ಅವರು ಕಾರ್ಯಕ್ರಮ ಸಂಚಾಲನೆ ನಡೆಸಿಕೊಟ್ಟರೆ, ಬಸವರಾಜ ಅವರು ವಂದನಾರ್ಪಣೆ ಮಾಡಿದರು.