
ಕಲಬುರಗಿ,ಡಿ.3-ಕಲಬುರಗಿ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್, ಬೆಂಗಳೂರು ನಡುವೆ ಓಡಾಡುವ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿನ ( ನಂಬರ್ 22231) ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವುದಕ್ಕೆ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಸದರು ಜನರ ಬಹುದಿನದ ಬೇಡಿಕೆಗೆ ಅನುಗುಣವಾಗಿ ಕಲಬುರಗಿ ಹಾಗೂ ಎಸ್ ಎಂ ವಿ ಟಿ ನಡುವೆ ವಂದೇ ಭಾರತ್ ಎಕ್ಸಪ್ರೆಸ್ ರೈಲು ಓಡಾಟ ಆರಂಭಿಸಿತ್ತು. ಕಲಬುರಗಿ ಯಿಂದ ಬೆಳಿಗ್ಗೆ 5.15 ಕ್ಕೆ ಹೊರಡುತ್ತಿದ್ದ ರೈಲು 23.30 ಕ್ಕೆ ಬೆಂಗಳೂರು ತಲುಪುತ್ತಿತ್ತು.
ಕಲಬುರಗಿ ಯಿಂದ ಹೊರಡುವ ಸಮಯ ಬದಲಾವಣೆ ಕುರಿತಂತೆ ನವೆಂಬರ್ 12, 2024 ರಂದು ರೇಲ್ವೆ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದು ಬೆಳಿಗ್ಗೆ 5.15 ಕ್ಕೆ ಬದಲಾಗಿ 6.30 ಕ್ಕೆ ಬಿಡುವುದಕ್ಕಾಗಿ ಅಗತ್ಯ ಕ್ರಮವಹಿಸುವಂತೆ ಕೋರಲಾಗಿತ್ತು.
ಜನಸಾಮಾನ್ಯರು ದೈನಂದಿನ ಕೆಲಸಗಳಿಗೆ ಬೆಂಗಳೂರಿಗೆ ತೆರಳಲು ಬೆಳಗಿನ 5.15 ಸಮಯ ಅನಾನುಕೂಲ ಉಂಟು ಮಾಡುತ್ತಿದ್ದು ಚಿಕ್ಕ ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಹೊಂದಿರುವ ಪ್ರಯಾಣಿಕರು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ರೈಲ್ವೆ ನಿಲ್ದಾಣವನ್ನು ಸಮಯಕ್ಕೆ ಸರಿಯಾಗಿ ತಲುಪಲು ಸ್ಥಳೀಯ ಸಾರಿಗೆ ವ್ಯವಸ್ಥೆ ಲಭ್ಯವಾಗದೇ ಜನರು ಅನೇಕ ಸಂದರ್ಭಗಳಲ್ಲಿ ರೈಲನ್ನು ತಪ್ಪಿಸಿಕೊಂಡಿದ್ದಾರೆ.
ಸ್ಥಳೀಯ ಸಮುದಾಯದಿಂದ ವ್ಯಾಪಕ ಪ್ರತಿಕ್ರಿಯೆಯ ಆಧಾರದ ಮೇಲೆ, ಪೀಕ್-ಅವರ್ ಪ್ರಯಾಣದ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಸಮಯಕ್ಕೆ ರೈಲು ಸೇವೆಯನ್ನು ಮರು ನಿಗದಿಪಡಿಸಬೇಕೆಂಬ ಬಲವಾದ ಬೇಡಿಕೆ ಇದ್ದು. ಹಾಗಾಗಿ ನಿರ್ಗಮನ ಸಮಯವನ್ನು ಬೆಳಿಗ್ಗೆ 5.15 ರ ಬದಲಿಗೆ ಬೆಳಿಗ್ಗೆ 6.30 ಕ್ಕೆ ಬದಲಾಯಿಸುವಂತೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಅಗತ್ಯ ಕ್ರಮ ಕೈಗೊಂಡು ಕಲಬುರಗಿ ಯಿಂದ ರೈಲು ನಿರ್ಗಮನದ ಸಮಯ 5.15 ಕ್ಕೆ ಬದಲಾಗಿ 6.10 ಕ್ಕೆ ಬದಲಾವಣೆ ಮಾಡಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಂಸದರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

























