Home ಜಿಲ್ಲೆ ಬೆಂಗಳೂರು ತ್ಯಾಮಗೊಂಡ್ಲುಗೆ ಚಂದನ್ ಮೃತದೇಹ: ಸಂಜೆ ಅಂತ್ಯಕ್ರಿಯೆ

ತ್ಯಾಮಗೊಂಡ್ಲುಗೆ ಚಂದನ್ ಮೃತದೇಹ: ಸಂಜೆ ಅಂತ್ಯಕ್ರಿಯೆ

ಬೆಂಗಳೂರು,ಫೆ.೧೬- ಕೆನಡಾದಲ್ಲಿ ಸಾವನ್ನಪ್ಪಿದ ಕನ್ನಡಿಗ ಚಂದನ್ ಮೃತದೇಹ ಸ್ವಗ್ರಾಮ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುಗೆ ನಿನ್ನೆ ಮಧ್ಯರಾತ್ರಿ ತರಲಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.


ಕೊಲೆಯಾಗಿ ಒಂದು ವಾರದ ಬಳಿಕ ಸ್ವಗ್ರಾಮಕ್ಕೆ ಚಂದನ್ ಮೃತದೇಹವನ್ನು ರಾತ್ರಿ ೧೧:೪೯ರ ವೇಳೆ ತ್ಯಾಮಗೊಂಡ್ಲುಗೆ ತರಲಾಗಿದ್ದು, ಮನೆ ಮುಂದೆ ಅಂತಿಮ ವಿಧಿವಿಧಾನದ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.


ತ್ಯಾಮಗೊಂಡ್ಲುವಿನ ಗ್ರಾಮೀಣ ಬ್ಯಾಂಕ್ ಹತ್ತಿರ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಸಿದ್ದು, ಮಧ್ಯಾಹ್ನ ೧೨ರಿಂದ ೩ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಆರ್ಯವೈಶ್ಯ ಸಂಘದ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.


ಸಂತೆ ಬೀದಿಯ ಮೈದಾನದಲ್ಲಿ ಚಂದನ್ ಮೃತದೇಹ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಗನ ಮೃತದೇಹದ ಮುಂದೆ ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ತಂದೆ-ತಾಯಿ ದುಖಃಪಡುತ್ತಿದ್ದು, ಕುಟುಂಬಸ್ಥರು ಚಂದನ್ ತಂದೆ-ತಾಯಿಗೆ ಸಾಂತ್ವನ ಹೇಳುತ್ತಿದ್ದಾರೆ. ತ್ಯಾಮಗೊಂಡ್ಲು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.


ಚಂದನ್ ತಂದೆ ನಂದ ಕುಮಾರ್ ಜೊತೆ ಮಾತನಾಡಿ, ಮಗನ ಕೊಲೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ. ಒಬ್ಬನೇ ಮಗ ಪುನರ್‌ಜನ್ಮ ತಾಳಲಿ. ನನ್ನ ಮಗ ಹಲವು ರೀತಿಯಲ್ಲಿ ಜನರ ಸೇವೆ ಮಾಡುತ್ತಿದ್ದನು ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಳಿ ಮನವಿ ಮಾಡಿದ್ದೇನೆ. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದಲ್ಲಿ ಮನವಿ ಮಾಡುತ್ತೇವೆ. ನನ್ನ ಮಗನ ಸಾವು ಸಹಜ ಸಾವಲ್ಲ. ಹೀಗಾಗಿ ಮಗನ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಮನವಿ ಮಾಡಿದರು.


ಚಂದನ್ ತಾಯಿ ಶೈಲಜಾ ಮಾತನಾಡಿ, ನಮ್ಮ ಮಗ ತುಂಬಾ ಒಳ್ಳೆ ಹೆಸರು ಪಡೆದಿದ್ದ. ಕೆಲಸದ ಜೊತೆಗೆ ಎಲ್ಲರ ಅಚ್ಚುಮೆಚ್ಚಿನ ಹೆಸರು ಮಾಡಿದ್ದ. ಕೆನಡಾದಲ್ಲಿ ಮನೆ ಮಾಡಲು ಆಸೆ ಹೊಂದಿದ್ದ. ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನ ಪಟ್ಟ. ಮಗನ ಸಾವು ಸಾಕಷ್ಟು ನೋವು ತಂದಿದೆ. ಇಂಥಾ ಮಗನನ್ನು ಕಳೆದುಕೊಂಡುಬಿಟ್ಟೆವು.


ಬಾಳಿ ಬದುಕಬೇಕಿದ್ದ ಮಗ ಸುಖ ಪಡುವ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೊರಟು ಹೋಗಿಬಿಟ್ಟ. ಅವನ ಕೊಲೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು. ನನ್ನ ಮಗನಿಗೆ ಹಾಗೂ ನಮಗೆ ನ್ಯಾಯ ಸಿಗಬೇಕು. ಅವನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಕಣ್ಣೀರಿಟ್ಟರು.