ಜನ ಜಾಗೃತಿಯಿಂದ ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಶೇ.16 ರಷ್ಟು ಇಳಿಕೆ

ಬೆಂಗಳೂರು,ಜ.29:ಕರ್ನಾಟಕ ರಾಜ್ಯದಲ್ಲಿ ಕ್ಯಾನ್ಸರ್ ಜಾಗೃತಿ ಅಭಿಯಾನದಡಿ ನಿಯಮಿತ ತಪಾಸಣೆ, ಆರಂಭಿಕ ಹಂತದಲ್ಲೇ ರೋಗ ಪತ್ತೆಯಂತಹ ಕ್ರಮಗಳಿಂದಾಗಿ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಇಳಿಕೆ ಪ್ರಮಾಣ ಶೇ. 16ರಷ್ಟಾಗಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷ 89165 ಸಕ್ರಿಯ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ.ಅವುಗಳಲ್ಲಿ ಶೇ.9 ರಷ್ಟು ಅಂದರೆ 4476 ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳಾಗಿವೆ. ರಾಜ್ಯದಲ್ಲಿ 1980ರಲ್ಲಿ ಮಹಿಳೆಯರಲ್ಲಿ ವರದಿಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಮಾಣ ಶೇ.40ರಷ್ಟಿತ್ತು ಮತ್ತು ಕಳೆದ ವರ್ಷ ಶೇ.16.2 ರಷ್ಟಿತ್ತು ಎಂದು ನಿರ್ದೇಶಕರು ವಿವರಿಸಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸಕಾಲಿಕ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಇದರ ತಡೆಗೆ ಹೆಚ್.ಪಿ.ವಿ.ಲಸಿಕೆ ಸಹಕಾರಿಯಾಗಿದ್ದು, ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ, ಕೆಸಿಎಂಎಂಆರ್ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಇದರ ತಡೆಗೆ ಸಂಸ್ಥೆಯು ಸಮುದಾಯ ಸಂಪರ್ಕ, ಆರೋಗ್ಯ ಕಾರ್ಯಕರ್ತರ ತರಬೇತಿ, ಉಪನ್ಯಾಸ,ವಾಕ್ ಥಾನ್ ಮತ್ತು ಜಾಗೃತಿ ಅಭಿಯಾನ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಮಹಿಳೆಯರು ನಿಯಮಿತ ತಪಾಸಣೆಗೆ ಒಳಗಾಗಬೇಕು. ಗರ್ಭಕಂಠ ಕ್ಯಾನ್ಸರ್ ನಿಯಂತ್ರಣದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರವು ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ಪ್ರಾದೇಶಿಕ ಕೇಂದ್ರಗಳ ಮೂಲಕ ತಪಾಸಣೆ ಮತ್ತು ಚಿಕಿತ್ಸಾ ಪ್ರಮಾಣ ಹೆಚ್ಚಿಸಿದೆ.ರಾಜ್ಯದಾದ್ಯಂತ ಗರ್ಭಕಂಠ ಕ್ಯಾನ್ಸರ್ ನಿಯಂತ್ರಿಸಲು ಜಾಗೃತಿ ಅಭಿಯಾನದ ಮೂಲಕ ಶ್ರಮಿಸುತ್ತಿದೆ ಎಂದು ಡಾ. ನವೀನ್ ತಿಳಿಸಿದ್ದಾರೆ.
ಕ್ಯಾನ್ಸರದಿಂದ ಗೆದ್ದವರ ಸ್ಫೂರ್ತಿದಾಯಕ ಮಾಹಿತಿ ಮತ್ತು ಚಿಕಿತ್ಸೆ ಪಡೆಯುತ್ತಿರುವವರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕ್ಯಾನ್ಸರ್ ಗೆದ್ದವರ ದಿನ ಆಚರಿಸಲಾಗುತ್ತಿದೆ ಮತ್ತು ಗರ್ಭಕಂಠ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸ್ತ್ರೀ ಗಂಥಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೋಭಾ ತಿಳಿಸಿದ್ದಾರೆ.