
ಕೋಲಾರ, ಫೆ,೧೯-ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವುದು ಪ್ರತಿಯೊಬ್ಬ ಮನುಷನ ಜನ್ಮಸಿದ್ಧ ಹಕ್ಕು. ಆದರೆ ಇಂದಿಗೂ ಸಮಾಜದಲ್ಲಿ ಜೀತ ಪದ್ಧತಿಯಂತಹ ಅನಿಷ ಪದ್ಧತಿ ಜೀವಂತವಾಗಿರುವುದು ದುರದೃಷಕರ. ಇದನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೆಸೆಯಲು ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಅವರು ಕರೆ ನೀಡಿದರು.
ಜಿಲ್ಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಕ್ತಿ ಒಕ್ಕೂಟ ಕರ್ನಾಟಕ, ಆಆಂತ ಜೀವ ಜ್ಯೋತಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡತನ ಮತ್ತು ಆರ್ಥಿಕ ಸಂಕಷಗಳಿಂದಾಗಿ ಸಣ್ಣಪುಟ್ಟ ಸಾಲಗಳನ್ನು ಪಡೆದು ಜನರು ಜೀತ ಪದ್ಧತಿಗೆ ಸಿಲುಕುತ್ತಿದ್ದಾರೆ. ಇದು ಕ್ರಮೇಣ ಬಡ್ಡಿಯಿಂದ ಚಕ್ರಬಡ್ಡಿಯಾಗಿ ಮಾರ್ಪಟ್ಟು, ಒಂದು ಇಡೀ ತಲೆಮಾರನ್ನೇ ಶೋಷಣೆಯ ಸುಳಿಗೆ ತಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭಾರತೀಯ ಸಂವಿಧಾನದ ವಿಧಿ ೨೩ರ ಅಡಿಯಲ್ಲಿ ಬಲವಂತದ ದುಡಿಮೆಯನ್ನು ನಿಷಧಿಸಲಾಗಿದೆ. ೧೯೭೬ರ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯು ಜಾರಿಗೆ ಬಂದಾಗಿನಿಂದ ದೇಶಾದ್ಯಂತ ಸುಮಾರು ೩ ಲಕ್ಷ ಹಾಗೂ ಕರ್ನಾಟಕದಲ್ಲಿ ೮೦ ಸಾವಿರಕ್ಕೂ ಹೆಚ್ಚು ಜನರನ್ನು ಜೀತಮುಕ್ತಗೊಳಿಸಲಾಗಿದೆ ಎಂದು ಅಂಕಿಅಂಶಗಳನ್ನು ಹಂಚಿಕೊಂಡರು.
ಜೀತ ಪದ್ಧತಿಯು ಕೇವಲ ಆರ್ಥಿಕ ಅಸಮಾನತೆಯಲ್ಲ, ಇದು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯ ಪ್ರತಿಫಲವೂ ಹೌದು. ಮುಖ್ಯವಾಗಿ ಇಟ್ಟಿಗೆ ಕಾರ್ಖಾನೆಗಳು, ಕೃಷಿ ಕ್ಷೇತ್ರ ಮತ್ತು ಅಸಂಘಟಿತ ವಲಯಗಳಲ್ಲಿ ಈ ಪದ್ಧತಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿವರಿಸಿದರು.
ಪೋಷಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಆರ್ಥಿಕ ಸಂಕಷದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕೆಲಸಕ್ಕೆ ಕಳುಹಿಸುವುದು ಅವರ ಭವಿಷಕ್ಕೆ ಕಂಟಕವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿ ಜಿಲ್ಲೆಯನ್ನು ಜೀತಮುಕ್ತಗೊಳಿಸಲು ಕೈಜೋಡಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ನಟೇಶ್ ಮಾತನಾಡಿ, ಸ್ವಾತಂತ್ರ್ಯ ಎಂಬುದು ಕೇವಲ ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಸಂವಿಧಾನ ನಮಗೆ ನೀಡಿರುವ ಗೌರವಯುತ ಜೀವನ ಮತ್ತು ಬದುಕುವ ಹಕ್ಕನ್ನು ಪ್ರತಿಯೊಬ್ಬರೂ ಅನುಭವಿಸಬೇಕು. ೫೦ ವಷಗಳ ಹಿಂದೆಯೇ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಗೆ ಬಂದಿದ್ದರೂ, ಇಂದಿಗೂ ಸಮಾಜದಲ್ಲಿ ಈ ಪಿಡುಗು ಜೀವಂತವಾಗಿರುವುದು ವಿಷದನೀಯ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜೀತ ಪದ್ಧತಿಯ ಭೀಕರತೆಯನ್ನು ವಿವರಿಸಲು ಅವರು ಡಾ. ರಾಜ್‌ಕುಮಾರ್ ನಟನೆಯ ’ಸಂಪತ್ತಿಗೆ ಸವಾಲ್ ಚಿತ್ರವನ್ನು ಉದಾಹರಿಸಿದರು. ಸಿನಿಮಾದಲ್ಲಿ ಸಾಲದ ನೆಪದಲ್ಲಿ ತಲೆಮಾರುಗಳ ಕಾಲ ಗುಲಾಮರನ್ನಾಗಿ ಇಟ್ಟುಕೊಳ್ಳುವ ದೃಶ್ಯಗಳು ಅಂದಿನ ಸಾಮಾಜಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಇಂದಿಗೂ ಕನಿಷ ವೇತನ ನೀಡದೆ, ವಿಶ್ರಾಂತಿ ಇಲ್ಲದೆ ದುಡಿಸಿಕೊಳ್ಳುವುದು ಅಥವಾ ಅತಿ ಹೆಚ್ಚಿನ ಸಾಲದ ಬಡ್ಡಿಗೆ ಕಟ್ಟಿಹಾಕಿ ಶೋಷಿಸುವುದು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಸಿದರು.
ಕೋಲಾರ ಜಿಲ್ಲೆಯನ್ನು ಜೀತ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಿಇಒ ಅವರು ಕೈಗೊಂಡಿರುವ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಸಮಾಜದಲ್ಲಿ ಎಲ್ಲಾದರೂ ಇಂತಹ ಪದ್ಧತಿ ಕಂಡುಬಂದಲ್ಲಿ ಕೂಡಲೇ ವಿಜಿಲೆನ್ಸ್ ಕಮಿಟಿ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾರ್ಚ್ ೧೪, ೨೦೨೬ ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್ ಬಗ್ಗೆ ಅವರು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಅವರು ಮಾತನಾಡಿ ಜೀತ ಕಾರ್ಮಿಕ ಪದ್ಧತಿಯು ಮಾನವನ ಶೋಷಣೆಯ ಒಂದು ಕ್ರೂರ ರೂಪವಾಗಿದ್ದು, ಆಧುನಿಕ ಸಮಾಜದಲ್ಲಿ ಇದು ಇನ್ನೂ ಅಸ್ತಿತ್ವದಲ್ಲಿರುವುದು ವಿಷದನೀಯ. ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಅಧಿಕಾರಿಯ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಅವರು ಸಂವಿಧಾನದ ಮಹತ್ವವನ್ನು ಒತ್ತಿಹೇಳುತ್ತಾ ಭಾರತೀಯ ಸಂವಿಧಾನದ ೧೪ನೇ ವಿಧಿಯಡಿ ನಾವೆಲ್ಲರೂ ಸಮಾನತೆಯ ಹಕ್ಕನ್ನು ಹೊಂದಿದ್ದೇವೆ. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಸಮಾಜದಲ್ಲಿ ಇಂದಿಗೂ ಜಾತಿ ಪದ್ಧತಿ, ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹಾಗೂ ಕಡಿಮೆ ವೇತನ, ಬಲವಂತದ ದುಡಿಮೆಯಂತಹ ಆರ್ಥಿಕ ಶೋಷಣೆಗಳು ಕಂಡುಬರುತ್ತಿವೆ. ಇವುಗಳನ್ನು ತಡೆಗಟ್ಟಲು ಕಾನೂನುಗಳು ಇನ್ನಷ ಬಲಗೊಳ್ಳಬೇಕಿದೆ ಎಂದರು
೧೯೭೬ರ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯಡಿ ಜೀತದಾಳುಗಳನ್ನು ಗುರುತಿಸಿ, ಅವರನ್ನು ಶೋಷಣೆಯಿಂದ ಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ವ್ಯಾಪಕ ಅಧಿಕಾರವಿದೆ.
ಅಧಿಕಾರಿಗಳ ಜವಾಬ್ದಾರಿ ಜೀತ ಪದ್ಧತಿಯಿಂದ ಮುಕ್ತರಾದವರಿಗೆ ದೈಹಿಕ ಮತ್ತು ಮಾನಸಿಕ ನೆರವು ನೀಡುವುದು ಹಾಗೂ ಅವರ ಪುನರ್ವಸತಿಗೆ ಶ್ರಮಿಸುವುದು ವಿವಿಧ ಇಲಾಖೆಗಳ ೫೨ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಇದನ್ನು ಕೇವಲ ಕೆಲಸವೆಂದು ಭಾವಿಸದೆ, ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಮೆಕ್ಕೆ ವೃತ್ತದ ವರೆಗೆ ಜಾಥಾ ಹಾಗೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಜೀತ ಪದ್ಧತೆ ನಿರ್ಮೂಲೆ ಕುರಿತಾಗಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಶಾಂತ ಜೀವ ಜ್ಯೋತಿ ಎನ್.ಜಿ.ಒ ನಿರ್ದೇಶಕರಾದ ಷಣ್ಮುಖ ಸುಂದರಂ ಸೇರಿದಂತೆ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.



























