Home ಜಿಲ್ಲೆ ಬೆಂಗಳೂರು ಅಭಿವೃದ್ಧಿ ಕಾಮಗಾರಿಗಳ ವೇಗಕ್ಕೆ ಸಿಇಒ ಸೂಚನೆ

ಅಭಿವೃದ್ಧಿ ಕಾಮಗಾರಿಗಳ ವೇಗಕ್ಕೆ ಸಿಇಒ ಸೂಚನೆ

ಕೋಲಾರ, ಫೆ, ೨೧-ಜಿಲ್ಲೆಯ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿ, ಕುಡಿಯುವ ನೀರಿನ ನಿರ್ವಹಣೆ ಹಾಗೂ ವಿವಿಧ ಜನಕಲ್ಯಾಣ ಯೋಜನೆಗಳ ವೇಗ ವರ್ಧನೆ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಪ್ರವೀಣ್ ಪಿ ಬಾಗೇವಾಡಿ ಅವರು ತಿಳಿಸಿದರು.


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ( ಪಿ ಡಿ ಓ) ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯನ್ನು ಅಂಕಿ-ಅಂಶಗಳ ಸಹಿತ ಪರಾಮರ್ಶಿಸಿ, ಬಾಕಿ ಇರುವ ಕೆಲಸಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.


ಕುಡಿಯುವ ನೀರಿನ ಸಮಸ್ಯೆ ತಡೆಗೆ ರೂ.೧೩.೨೪ ಕೋಟಿ ಕ್ರಿಯಾ ಯೋಜನೆಯಿಂದ ಮುಂಬರುವ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ತೊಂದರೆಯಾಗದಂತೆ ಜಿಲ್ಲೆಯಲ್ಲಿ ಒಟ್ಟು ೨೭೩ ಕಾಮಗಾರಿಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ ರೂ.೧೩೨೪.೬೬ ಲಕ್ಷಗಳ ಅಂದಾಜು ಮೊತ್ತದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯಾದ್ಯಂತ ಇರುವ ೧,೨೩೯ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಪ್ರಸ್ತುತ ೧,೦೯೫ ಘಟಕಗಳು ಸುಸ್ಥಿತಿಯಲ್ಲಿದ್ದು, ಬಾಕಿ ಇರುವ ಘಟಕಗಳನ್ನು ತಕ್ಷಣ ದುರಸ್ತಿಗೊಳಿಸಲು ಸೂಚಿಸಿದರು.


೨೦೨೫-೨೬ನೇ ಸಾಲಿನ ಕಂದಾಯ ವಸೂಲಾತಿಯಲ್ಲಿ ಬಂಗಾರಪೇಟೆ ತಾಲ್ಲೂಕು ಜಿಲ್ಲೆಯು ಶೇ.೭೫.೯೯ ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ರೂ.೧೫,೨೨೧.೭೫ ಲಕ್ಷಗಳ ಬೇಡಿಕೆಯ ಪೈಕಿ ರೂ.೧೧,೫೬೬.೩೩ ಲಕ್ಷ ಸಂಗ್ರಹವಾಗಿದೆ.


ಬಂಗಾರಪೇಟೆ (ಶೇ. ೮೦.೮೫) ಮೊದಲ ಸ್ಥಾನದಲ್ಲಿದ್ದರೆ, ಶ್ರೀನಿವಾಸಪುರ (ಶೇ. ೭೯.೧೬) ಮತ್ತು ಮಾಲೂರು (ಶೇ. ೭೭.೧೩) ನಂತರದ ಸ್ಥಾನಗಳಲ್ಲಿವೆ. ಕೋಲಾರ ತಾಲೂಕು ಕಂದಾಯ ವಸೂಲಾತಿಯಲ್ಲಿ (ಶೇ. ೭೨.೫೫) ಈ ಕುರಿತು ಹೆಚ್ಚಿನ ಗಮನಹರಿಸುವಂತೆ ಸೂಚಿಸಿದರು.


ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯು ವಾರ್ಷಿಕ ಗುರಿಯ ಶೇ.೧೦೪.೩೨ ರಷ್ಟು ಸಾಧನೆ ಮಾಡಿದೆ. ವಾರ್ಷಿಕ ೫೩.೦೦ ಲಕ್ಷ ಮಾನವ ದಿನಗಳ ಗುರಿಯ ಎದುರು ಈಗಾಗಲೇ ೫೫.೨೯ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೬೮,೦೭೪ ಕಾಮಗಾರಿಗಳ ಪೈಕಿ ೫೫,೭೪೯ ಪೂರ್ಣಗೊಂಡಿದ್ದು, ಬಾಕಿ ಇರುವ ೧೨,೩೨೫ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಲು ಆದೇಶಿಸಿದರು.


ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಪ್ರತಿ ತಾಲೂಕಿಗೆ ರೂ. ೧೦೦ ಲಕ್ಷದಂತೆ ಜಿಲ್ಲೆಯ ೬ ತಾಲೂಕುಗಳಿಗೆ ಒಟ್ಟು ರೂ. ೬೦೦ ಲಕ್ಷಗಳ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ೯೧೦ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ (ಂಃಅ) ಮಾಡಲಾಗಿದ್ದು, ಕೆ.ಜಿ.ಎಫ್ ಮತ್ತು ಮಾಲೂರುಗಳಲ್ಲಿ ಆಶ್ರಯ ತಾಣಗಳಿಗಾಗಿ ಜಾಗ ಗುರುತಿಸಲಾಗಿದೆ.


ಗ್ರಾಮ ಪಂಚಾಯಿತಿಗಳಿಂದ ಸರ್ಕಾರಕ್ಕೆ ಜಮೆಯಾಗಬೇಕಾದ ರೂ. ೨.೧೩ ಕೋಟಿ ಮೊತ್ತದ ಭಿಕ್ಷುಕರ ಕರವನ್ನು (ಃeggಚಿಡಿs ಅess) ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.


ಸಾರ್ವಜನಿಕರಿಂದ ಸ್ವೀಕರಿಸಲಾದ ಒಟ್ಟು ೩೬೫ ಅರ್ಜಿಗಳ ಪೈಕಿ ೨೫೫ ಇತ್ಯರ್ಥಗೊಂಡಿದ್ದು, ಬಾಕಿ ಇರುವ ೧೧೦ ಅರ್ಜಿಗಳನ್ನು ವಿಳಂಬ ಮಾಡದೆ ಇತ್ಯರ್ಥಪಡಿಸಲು ಪಿಡಿಒಗಳಿಗೆ ಸೂಚನೆ ನೀಡಲಾಯಿತು.


“ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಯಾವುದೇ ಲೋಪವಾಗಬಾರದು. ವಿಶೇಷವಾಗಿ ಸೈನಿಕರಿಗೆ ನಿವೇಶನ ನೀಡುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು,” ಎಂದು ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಟಿ. ಕೆ. ರಮೇಶ್, ಯೋಜನಾ ನಿರ್ದೇಶಕ ರವಿಚಂದ್ರ, ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ಪಿ ಡಿ ಓ ಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.