ಕಲಬುರಗಿ,ಸೆ.29: ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಮಗ್ ಮೀನಾ ಮತ್ತು ಎಸ್.ಪಿ. ಅಡ್ಡೂರು ಶ್ರೀನಿವಾಸಲು ಅವರು ರವಿವಾರ ಜೇವರ್ಗಿ ತಾಲೂಕಿನ ವಿವಿಧ ಪ್ರವಾಹ ಪೀಡಿತ ಕೂಡಿ, ಹರವಾಳ, ರದ್ದೇವಾಡಗಿ, ಕಟ್ಟಿಸಂಗಾವಿ ಗ್ರಾಮ ಮತ್ತು ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ನೀಡಲಾಗುತ್ತಿರುವ ಊಟ, ಮೂಲಸೌಕರ್ಯ ಪರಿಶೀಲಿಸಿದರು.
ಕೂಡಿ ಗ್ರಾಮದ ಕಾಳಜಿ ಕೇಂದೃದಲ್ಲಿ ಸಂತ್ರಸ್ಥರೊಂದಿಗೆ ಸಮಾಲೋಚನೆ ನಡೆಸಿದ ಅವರು ಸರ್ಕಾರ ನಿಮ್ಮೊಂದಿಗಿದೆ ಎಂದು ಅಭಯ ನೀಡಿದರು. ಸಂತ್ರಸ್ತರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಹಾಗೂ ಟ್ಯಾಂಕರ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಮಾಡಬೇಕು. ವಿದ್ಯುತ್ ವ್ಯತ್ಯಯವಾದಲ್ಲಿ ಪರ್ಯಾಯವಾಗಿ ಜನರೇಟರ್ ವ್ಯವಸ್ಥೆ ಮಾಡಬೇಕು. ಕಾಳಜಿ ಕೇಂದ್ರಕ್ಕೆ ಹೋಗುವ ರಸ್ತೆ ಕೆಸರಿನಿಂದ ಕೂಡಿದ್ದು, ಕೂಡಲೇ ಕಚ್ಚಾ ರಸ್ತೆ ನಿರ್ಮಾಣ ಮಾಡುವಂತೆ ಸ್ಥಳದಲ್ಲಿದ್ದ ಪಿ.ಡಿ.ಓ ಗೆ ಸೂಚಿಸಿದರು.
ಹರವಾಳ ಗ್ರಾಮದಲ್ಲಿ ಮುಳುಗಡೆಯಾದ ಮನೆಗಳ ವೀಕ್ಷಣೆ ಮಾಡಿ ಗ್ರಾಮಕ್ಕೆ ಹತ್ತಿಕೊಂಡಿರುವ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಜನಸಾಮಾನ್ಯರು ಸಂಚಾರ ಮಾಡದಂತೆ ತಿಳಿಹೇಳಿದರು. ಇಲ್ಲಿನ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದರು.
ನಂತರ ರದ್ದೇವಾಡಗಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದಾಗ ಹಾಸಿಗೆ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಅವರು, ಕೂಡಲೇ ಹಾಸಿಗೆ ವ್ಯವಸ್ಥೆ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಾರ್ಗ ಮಧ್ಯೆ ಕಟ್ಟಿ ಸಂಗಾವಿ ಸೇತುವೆ ವೀಕ್ಷಿಸಿ, ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಸೇತುವೆ ಮೇಲೆ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಓಡಾಟ ಮಾಡದಂತೆ ತಿಳಿಹೇಳಿದರು.
ಜೇವಗಿ ತಾಲೂಕಿನ ತಹಸಿಲ್ದಾರ ಮಲ್ಲಣ್ಣ ಯಲಗೊಂಡ, ತಾಲೂಕ ಪಂಚಾಯತ್ ಇ.ಓ ರವಿಚಂದ್ರನ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.





















