
ಕೋಲಾರ,ಮೇ.೨೨- ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವಲ್ಲಿ, ಪರೀಕ್ಷಾ ಪಾವಿತ್ರತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಚಂಬೆರಾಜೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀಟ್ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸು, ಭವಿಷ್ಯ ಕೇಂದ್ರ ಸರ್ಕಾರ ಹಾಳು ಮಾಡಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನೀಟ್ ಪರೀಕ್ಷೆ ಮಾತ್ರವಲ್ಲ, ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ದೊಡ್ಡ ದಂಧೆಯೇ ನಡೆಯುತ್ತಿದೆ. ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮಗಳು ನಡೆದ ಆರೋಪಗಳಿವೆ. ಮೋದಿ ಸರ್ಕಾರ ಬಡವರ ಪರವಾಗಿಲ್ಲ, ಬಂಡವಾಳಶಾಹಿಗಳ ಪರವಿದೆ ಎಂದು ಟೀಕೆ ಮಾಡಿದರು.
ದೇಶದಲ್ಲಿ ಸುಮಾರು ೨೪ ಲಕ್ಷ ರಾಜ್ಯದಲ್ಲಿ ೧.೪ ಲಕ್ಷ ವಿದ್ಯಾರ್ಥಿಗಳು ನೀಟ್ ಮೂಲಕ ತಮ್ಮ ವೈದ್ಯಕೀಯ ಪದವಿಯ ಕನಸು ಕಂಡಿದ್ದರು. ಅಷ್ಟೂ ಜನರಿಗೆ ಮೋದಿ ಸರ್ಕಾರ ಅನ್ಯಾಯ ಮಾಡಿದೆ. ನೀಟ್ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇನ್ನು ಮುಂದೆ ನೀಟ್ ಮತ್ತಿತರ ಪರೀಕ್ಷೆಗಳು ಪ್ರಾಮಾಣಿಕವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇಂತಹ ಸೋರಿಕೆ ಇದೇ ಮೊದಲಲ್ಲ ಪರೀಕ್ಷೆ ಅಕ್ರಮ ದಂಧೆಯಾಗಿದೆ. ವೈದ್ಯರಾಗಬೇಕೆಂಬ ಆಸೆಯಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕನಸ್ಸನ್ನು ನುಚ್ಚುನೂರು ಮಾಡಿದೆ ಎಂದು ಟೀಕಿಸಿದರು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಪ್ರಧಾನಿ ಮೋದಿ ಹಾಗೂ ಸಂಬಂಧಿಸಿದ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಈ ಬಗ್ಗೆ ಎಲ್ಲಾ ಸಂಸದರು ಸಂಸತ್ತಿನದಲ್ಲಿ ಪ್ರಶ್ನೆ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.




























