Home ಜಿಲ್ಲೆ ಕಲಬುರಗಿ ಸೋನ್ನ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಸಡಗರ ಕಲಾವಿದ ಕಲ್ಲಪ್ಪ ವಿಶ್ವಕರ್ಮ ಅವರಿಂದ ಭೂತಾಯಿ ಸೀಮಂತ ಆಚರಣೆ

ಸೋನ್ನ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಸಡಗರ ಕಲಾವಿದ ಕಲ್ಲಪ್ಪ ವಿಶ್ವಕರ್ಮ ಅವರಿಂದ ಭೂತಾಯಿ ಸೀಮಂತ ಆಚರಣೆ

ಜೇವರ್ಗಿ: ಅನ್ನ ನೀಡುವ ಭೂತಾಯಿಯನ್ನು ಗರ್ಭಿಣಿ ಎಂದು ಭಾವಿಸಿ, ಸಾಂಪ್ರದಾಯಿಕವಾಗಿ ಸೀಮಂತ ಮಾಡುವ ವಿಶಿಷ್ಟ ಆಚರಣೆಯಾದ ‘ಭೂತಾಯಿ ಸೀಮಂತ’ ಕಾರ್ಯಕ್ರಮವನ್ನು ಜೇವರ್ಗಿ ತಾಲೂಕಿನ ಸೋನ್ನ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಅಂಗವಾಗಿ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಕಲಾಭಿಮಾನಿ ಕಲ್ಲಪ್ಪ ವಿಶ್ವಕರ್ಮ ಅವರು ಈ ವಿಶಿಷ್ಟ ಜನಪದ ಸಂಪ್ರದಾಯವನ್ನು ಆಚರಿಸುವ ಮೂಲಕ ಗ್ರಾಮೀಣ ಸಂಸ್ಕøತಿ ಹಾಗೂ ಕೃಷಿ ಪರಂಪರೆಯ ಮಹತ್ವವನ್ನು ಸಾರಿದರು.
ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸೀಗೆ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಗರ್ಭಿಣಿ ಮಹಿಳೆಗೆ ಸೀಮಂತ ಮಾಡುವ ರೀತಿಯಲ್ಲಿಯೇ ಭೂತಾಯಿಗೆ ಸೀರೆ, ಕುಪ್ಪಸ, ಬಳೆ, ಹೂವು ಹಾಗೂ ಕುಂಕುಮ ಅರ್ಪಿಸಿ, ಸಂಪ್ರದಾಯಬದ್ಧವಾಗಿ ಉಡಿ ತುಂಬಿ ಪೂಜೆ ಸಲ್ಲಿಸಲಾಯಿತು.
ಬಳಿಕ ಗ್ರಾಮೀಣ ಶೈಲಿಯ ಆಹಾರವನ್ನು ನೈವೇದ್ಯವಾಗಿ ಅರ್ಪಿಸಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ನಾಡಿನ ಸುಭಿಕ್ಷತೆಗಾಗಿ ಪ್ರಾರ್ಥಿಸಲಾಯಿತು.
ಕೃಷಿ ಸಂಸ್ಕೃತಿಯ ಪ್ರತೀಕವಾದ ಈ ಆಚರಣೆ ಭೂಮಿಯ ಮಹತ್ವ, ರೈತರ ಬದುಕು ಹಾಗೂ ಪ್ರಕೃತಿಯೊಂದಿಗಿನ ಮಾನವನ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ನಶಿಸಿಹೋಗುತ್ತಿರುವ ಗ್ರಾಮೀಣ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಲ್ಲಪ್ಪ ವಿಶ್ವಕರ್ಮ ಅವರು ಆಚರಿಸಿದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.