
ಬೀದರ್, ಜ.5:ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿ, ಬೀದರ್ ವತಿಯಿಂದ ಮಹಿಳೆಯರ ಪಾಲಿನ ವಿದ್ಯಾ ದೇವತೆ ಹಾಗೂ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿಯನ್ನು ಶನಿವಾರ ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಉಷಾಬಾಯಿ ಬನ್ಸುಡೆ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು. ಭಾರತದ ಶೋಷಿತರು, ಹಿಂದುಳಿದವರು ಹಾಗೂ ದಲಿತ ಮಹಿಳೆಯರ ಪಾಲಿನ ವಿದ್ಯಾ ದೇವತೆ ಸಾವಿತ್ರಿಬಾಯಿ ಫುಲೆ ಆಗಿದ್ದು, ಇಂದು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವ ಪ್ರತಿಯೊಬ್ಬ ಹೆಣ್ಣುಮಗಳು ಅವರ ಋಣವನ್ನು ಸ್ಮರಿಸಬೇಕೆಂದು ಹೇಳಿದರು.
ಸಾವಿತ್ರಿಬಾಯಿ ಫುಲೆ ಅವರು ಆರಂಭಿಸಿದ ಶಿಕ್ಷಣದ ಕ್ರಾಂತಿಯನ್ನು ಮುಂದುವರೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಮಹಿಳಾ ಸಮಿತಿ ಮುಖ್ಯಸ್ಥರಾದ ನಂದಮ್ಮಾ ಕುಂದೆ, ಸೊನ್ನಮ್ಮಾ ಕಸ್ತೂರೆ, ಶಶಿಕಲಾ ಕಾಂಬಳೆ, ಜಿಲ್ಲಾ ಯುವ ಅಧ್ಯಕ್ಷ ಪ್ರಕಾಶ ರಾವಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.























