
ಕಲಬುರಗಿ: ಎಸ್ಬಿಆರ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಸಡಗರ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಎಸ್. ಎಲ್. ಚವ್ಹಾಣ್, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಈಖಿSಅ-I, ಕಲಬುರಗಿ, ಅವರು ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳು, ಸತ್ಯ, ಅಹಿಂಸೆ ಮತ್ತು ನ್ಯಾಯದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಗೌರವಾನ್ವಿತ ಅತಿಥಿಗಳಾದ ಶ್ರೀ ವಿಜಯಕುಮಾರ್ ಜಟ್ಲಾ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು, ಕಲಬುರಗಿ, ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಶಿಸ್ತು, ಸಮರ್ಪಣೆ ಮತ್ತು ದೇಶಸೇವೆಯ ಮನೋಭಾವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ವಿಶಿಷ್ಟ ಅತಿಥಿಗಳಾದ ಶ್ರೀ ಎ. ಕೆ. ರಾಮೇಶ್ವರ, ಮಕ್ಕಳ ಸಾಹಿತಿ, ಅವರು ಗಾಂಧೀಜಿಯವರೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡು, ಗಾಂಧೀಜಿಯವರ ಸರಳತೆ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಗಾಂಧೀಜಿಯವರ ಐತಿಹಾಸಿಕ ದಂಡಿ ಉಪ್ಪಿನ ಸತ್ಯಾಗ್ರಹದ ಮೆರವಣಿಗೆಯನ್ನು ಸಾಂಪ್ರದಾಯಿಕ ಉಡುಗೆ-ತೊಡುಗೆ ಹಾಗೂ ದೇಶಭಕ್ತಿಯ ಘೋಷಣೆಗಳೊಂದಿಗೆ ಮರುಸೃಷ್ಟಿಸಿದರು. ಈ ಮನೋಜ್ಞ ಪ್ರಸ್ತುತಿಯು ದಂಡಿ ಯಾತ್ರೆಯ ಐತಿಹಾಸಿಕ ಸನ್ನಿವೇಶವನ್ನು ಸ್ಮರಿಸುವುದರ ಜೊತೆಗೆ, ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಸಂದೇಶವನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಮನದಲ್ಲಿ ಮೂಡಿಸಿತು.
ಇದರೊಂದಿಗೆ ವಿದ್ಯಾರ್ಥಿಗಳಿಂದ ವಿವಿಧ ಭಜನೆಗಳು ಹಾಗೂ ಭಾಷಣಗಳು ಜರುಗಿದವು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಈ ಸಮಗ್ರ ಕಾರ್ಯಕ್ರಮವನ್ನು ಎಸ್ಬಿಆರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಎನ್. ಎಸ್. ದೇವರಕಲ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.























