ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ

ಬಾಗಲಕೋಟೆ, ಜೂ4: ಜಿಲ್ಲೆಯಲ್ಲಿ ಜೂನ್ 7 ರಂದು ಜರುಗಲಿರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ವಿಜೃಂಬನೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದಲ್ಲಿ ಆಚರಿಸಲಾಗುತ್ತಿರುವ ಎಲ್ಲ ಧರ್ಮಿಯರ ಹಬ್ಬಗಳು ಜಾಗತಿಕ ಮನ್ನಣೆ ಪಡೆದಿವೆ. ಆ ದಿಶೆಯಲ್ಲಿ ಬರುವ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಲು ನಿಮ್ಮ ರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೆ ತರಲಾಗಿದ್ದು, ಅವುಗಳ ಪಾಲಿಸುವ ಕೆಲಸವಾಗಬೇಕು ಎಂದರು.


ಹಬ್ಬವೆಂದರೆ ಒಳ್ಳೇಯ ಊಟ, ಒಳ್ಳೇಯ ನೋಟದೊಂದಿಗೆ ಅವಿಷ್ಮರಣೀಯವಾಗಿರಬೇಕು. ವರ್ಷಕ್ಕೊಂದು ಬಾರಿ ಈ ಹಬ್ಬಗಳಲ್ಲಿ ಧನಾತ್ಮಕ ಚಿಂತನೆಗಳಿಂದ ಹೆಸರುವಾಸಿಗಳಾಗಬೇಕೆ ಹೊರತು ಋಣಾತ್ಮಕ ಘಟನೆಗಳಿಗೆ ಅವಕಾಶ ಕೊಡಬಾರದು. ಹಬ್ಬ ಆಚರಣೆಗಳಿಗೆ ಬೇಕಾಗುವ ಸಹಕಾರಕ್ಕೆ ಜಿಲ್ಲಾಡಳಿತ ಸದಾ ಸಿದ್ದವಿದ್ದು, ವಿಜೃಂಬನೆಯಿಂದ ಹಬ್ಬವನ್ನು ಆಚರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಕಾನೂನುಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಲಾಗಿದ್ದು, ಅವುಗಳನ್ನು ನಿರ್ವಹಿಸುವ ಕಾರ್ಯ ನಮ್ಮದ್ದಾಗಿದ್ದು, ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ಇಲಾಖೆಯದಲ್ಲ. ಜಿಲ್ಲೆಯಾದ್ಯಂತ ಆಚರಿಸಲ್ಪಡುವ ಬಕ್ರೀದ್ ಹಬ್ಬದ ನಿಮಿತ್ಯ 8 ಚಿತಾ ವಾಹನಗಳು ಕಾರ್ಯನಿರ್ವಹಿಸಲಿವೆ. ಅಕ್ರಮ ಜಾನುವಾರ ಸಾಗಾಣಿಕೆ ತಡೆಗಾಗಿ 25 ಚೆಕ್‍ಪೋಸ್ಟಗಳನ್ನು ತೆರೆಯಲಾಗಿದೆ. ಈಗಾಗಲೇ ಜೂನ್ 1 ರಿಂದ ಎಲ್ಲ ಕಸಾಯಿಖಾನೆಗಳನ್ನು ಬಂದ್ ಮಾಡಲಾಗಿದೆ. ಭಾವನೆಗಳಿಗೆ ದಕ್ಕೆ ಬರದ ಹಾಗೆ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ತಿಳಿಸಿದರು.


ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ ಮಾತನಾಡಿ ಅನಧಿಕೃತವಾಗಿ ಆಕಳು, ಕರು, ಎತ್ತು, ಒಂಟೆ ಹಾಗೂ 13 ವರ್ಷದೊಳಗಿನ ಎಮ್ಮೆಗಳನ್ನು ಸಾಗಾಣಿಕೆ ಮಾಡುವುದು ಮತ್ತು ವಧೆ ಮಾಡುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ದನ, ಎಮ್ಮೆಗಳ ವಧೆಯಾಗುವ ಮತ್ತು ಅಕ್ರಮ ಸಾಗಾಣಿಕೆ ಆಗುವ ಸಾಧ್ಯತೆ ಇರುತ್ತದೆ. ಕೃಷಿ ಮತ್ತು ಹೈನುಗಾರಿಕೆ ಉದ್ದೇಶಗಳಿಗೆ ಮಾತ್ರ ಜಾನುವಾರು ಸಾಗಾಣಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶವಿದ್ದು, ಪಶು ಸಂಗೋಪನಾ ಇಲಾಖೆಯಿಂದ ಅಧಿಕೃತ ಅನುಮತಿ ಪತ್ರ ಪಡೆಯುವುದು ಅವಶ್ಯಕತೆ ಇದೆ ಎಂದು ತಿಳಿಸಿದರು.


ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸುರುಖೋಡ, ತಹಶೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ವಾಸಣ್ಣಾ ಆರ್. ಸೇರಿದಂತೆ ಸಮುದಾಯದ ಮುಖಂಡರಾದ ಅಥಣಿ, ಎ.ಎ.ದಾಂಡಿಯಾ, ಅಶೋಕ ಲಿಂಬಾವಳಿ, ಶ್ರೀನಿವಾಸ ಬಳ್ಳಾರಿ ಉಪಸ್ಥಿತರಿದ್ದರು.