ಜಾತಿ ಸಮೀಕ್ಷೆ.ಒಕ್ಕಲಿಗ ಎಂದು ಬರೆಸಲು ಕರೆ

ಬೆಂಗಳೂರು,ಸೆ೨೦:ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ಸೆ.೨೨ರಿಂದ ನಡೆಸಲಿರುವ ಜಾತಿ ಗಣತಿ ಸಮೀಕ್ಷೆಯ ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ಎಲ್ಲಾ ಒಕ್ಕಲಿಗರು ಒಕ್ಕಲಿಗ ಎಂದೇ ಬರೆಸಬೇಕು ಎಂಬ ತೀರ್ಮಾನವನ್ನು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಹಾಗೂ ರಾಜಕೀಯ ನಾಯಕರ ಸಭೆಯಲ್ಲಿ ಕೈಗೊಳ್ಳಲಾಗಿದೆ.


ಆದಿಚುಂಚನಗಿರಿ ಮಠಾಧೀಶರಾದ ಡಾನಿರ್ಮಲಾನಂದನಾಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಹಾಗೂ ಎಲ್ಲ ರಾಜಕೀಯ ನಾಯಕರುಗಳ ಸಭೆಯಲ್ಲಿ ಜಾತಿಗಣತಿ ಕಾಲಂನಲ್ಲಿ ಒಕ್ಕಲಿಗ ಎಂದು ಬರೆಸುವ ಬಗ್ಗೆ ಒಕ್ಕೊರಲಿನ ತೀರ್ಮಾನವನ್ನು ಕೈಗೊಳ್ಳಲಾಯಿತು.


ಜಾತಿ ಗಣತಿ ಸಂದರ್ಭದಲ್ಲಿ ಎಲ್ಲ ಒಕ್ಕಲಿಗರು ಜಾತಿ ಹಾಗೂ ಉಪಜಾತಿ ಕಾಲಂಗಳಲ್ಲಿ ಒಕ್ಕಲಿಗ ಎಂದೇ ಬರೆಸಬೇಕು ಎಂದು ಸಮುದಾಯದವರಿಗೆ ಈ ಸಭೆಯ ಮೂಲಕ ಕರೆ ನೀಡಲಾಯಿತು.


ಜಾತಿ ಗಣತಿ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ನಿಲುವು ಏನಿರಬೇಕು ಎಂಬ ಬಗ್ಗೆ ಇಂದು ನಡೆದ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಹಾಗೂ ರಾಜಕೀಯ ನಾಯಕರ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಒಕ್ಕಲಿಗ ನಾಯಕರುಗಳು ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿ, ಸ್ವಾಮೀಜಿಗಳು, ಆದಿಚುಂಚನಗಿರಿ ಮಠಾಧೀಶರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದು ಹೇಳಿದರು.


ಜಾತಿ ಗಣತಿ ಸಂದರ್ಭದಲ್ಲಿ ಒಕ್ಕಲಿಗ ಎಂದೇ ಬರೆಸುವ ತೀರ್ಮಾನದ ಜತೆಗೆ ಜಾತಿ ಗಣತಿ ಅವಧಿಯನ್ನು ವಿಸ್ತರಿಸಬೇಕು. ಕನಿಷ್ಠ ೨ ತಿಂಗಳ ಕಾಲ ಸಮೀಕ್ಷಾ ಕಾರ್ಯ ನಡೆಸಬೇಕು ಎಂಬ ಒತ್ತಾಯವನ್ನು ಸರ್ಕಾರಕ್ಕೆ ಸಭೆಯಲ್ಲಿ ಮಾಡಲಾಗಿದೆ.


ಆದಿಚುಂಚನಗಿರಿ ಮಠಾಧೀಶರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ಪ.ನಾ.ಹಳ್ಳಿಯ ಸ್ಫಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಶೋಭಕರಂದ್ಲಾಜೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಚಿವ ಚಲುವರಾಯಸ್ವಾಮಿ, ಸುಧಾಕರ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ್, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಎಸ್.ಟಿ. ಸೋಮಶೇಖರ್, ಎಸ್.ಆರ್. ಶ್ರೀನಿವಾಸ್, ಸಿ.ಟಿ. ರವಿ, ರಾಮಚಂದ್ರೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಬಹುತೇಕ ಸಂಸದರು, ಶಾಸಕರು ಪಾಲ್ಗೊಂಡಿದ್ದರು.