ಜಾತಿ ಮರು ಗಣತಿ ವರಿಷ್ಠರ ನಿರ್ಧಾರ: ಸಿಎಂ

ಚಿಕ್ಕಬಳ್ಳಾಪುರ, ಜೂ. ೧೧- ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ (ಜಾತಿ ಗಣತಿ) ಮರುಗಣತಿ ನಡೆಸುವ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


೨೦೧೫ರಲ್ಲಿ ಜಾತಿಗಣತಿ ನಡೆದಿದ್ದು ಈಗ ೧೦ ವರ್ಷಗಳು ಕಳೆದಿವೆ. ಹೀಗಾಗಿ ಮರು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ ಎಂದು ಗೌರಿಬಿದನೂರು ತಾಲ್ಲೂಕಿನ ಅಲಕಪುರ ಹೆಲಿಪ್ಯಾಡ್‌ನಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿದರು.


ಕಾಂತರಾಜು ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಆ ವರದಿಯನ್ನು ಪೂರ್ಣವಾಗಿ ಕಡೆಗಣಿಸಿಲ್ಲ. ಕೆಲ ಬದಲಾವಣೆಯೊಂದಿಗೆ ೬೦ ರಿಂದ ೭೦ ದಿನಗಳಲ್ಲಿ ಮರು ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು.


ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿ ರಾಜಕೀಯವಾಗಿ ರಾಜೀನಾಮೆ ಕೇಳುವುದು ಅಭ್ಯಾಸವಾಗಿದೆ ಎಂದು ಟೀಕಿಸಿದರು.


ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ೪೦ ರಿಂದ ೫೦ ಜನ ಮೃತಪಟ್ಟಿದ್ದರು. ಆ ಸಮಯದಲ್ಲಿ ಬಿಜೆಪಿಯವರು ಆ ರಾಜ್ಯದ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದರೆ? ಸೇತುವೆಯೆಂದು ಉದ್ಘಾಟನೆಗೊಂಡ ದಿನವೇ ಬಿದ್ದು ಜನರು ಸಾವನ್ನಪ್ಪಿದ್ದರು. ಆಗ ಪ್ರಧಾನಿಯವರ ರಾಜೀನಾಮೆ ಕೇಳಿದರೆ? ಗೋದ್ರಾ ಹತ್ಯೆಕಾಂಡದಲ್ಲಿ ಎಷ್ಟು ಮಂದಿ ಸತ್ತರು. ಆಗ ಗುಜರಾತ್ ಮುಖ್ಯಮಂತ್ರಿ ಯಾರಾಗಿದ್ದರು? ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಸರಬರಾಜು ಮಾಡದೆ ೨೩ ಜನರು ಮೃತಪಟ್ಟಿದ್ದಾಗ ಆಗ ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಿದರೆ ಎಂದು ಮುಖ್ಯಮಂತ್ರಿಗಳು ಪ್ರಶ್ನೆಗಳ ಸುರಿಮಳೆಗೈದರು.


ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ ವ್ಯಕ್ತಿ ಆಯೋಗ ರಚನೆ ಮಾಡಿದ್ದು ಈ ಆಯೋಗ ೩೦ ದಿನಗಳಲ್ಲಿ ವರದಿ ಸಲ್ಲಿಸಲಿದೆ. ಹೀಗಾಗಿ ಈ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ನಿರಾಕರಿಸಿದರು.


ರಾಜ್ಯದ ವಿಶ್ವವಿದ್ಯಾಲಯದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಂತೆ ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಅಗತ್ಯ ಬಿದ್ದರೆ ಇನ್ನು ಹೆಚ್ಚಿನ ಉಪನ್ಯಾಸಕರನ್ನು ನೇಮಿಸಿ ಅವರ ವೇತನ ಹೆಚ್ಚಿಸಿ ಸೌಲಭ್ಯಗಳನ್ನು ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸರ್ಕಾರ ಒತ್ತು ನೀಡಿದೆ ಎಂದರು.


೨ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆ


ಜಲ ಜೀವನ್ ಯೋಜನೆಯಡಿ ರಾಜ್ಯ ಸರ್ಕಾರ ೫೦% ಅನುದಾನ ನೀಡಿದ್ದಾರೆ ೩೦% ಮಾತ್ರ ಕೇಂದ್ರ ಸರ್ಕಾರ ನೀಡುತ್ತದೆ. ೨೦% ಫಲಾನುಭವಿಗಳು ನೀಡುತ್ತಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ರಾಜ್ಯ ಸರ್ಕಾರದ ಪಾಲು ಹೆಚ್ಚಿದ್ದರೂ ಆಯುಷ್ಮಾನ್ ಭಾರತ್ ಯೋಜನೆ ಎನ್ನುತ್ತಾರೆ. ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಪ್ರಧಾನ ಮಂತ್ರಿಗಳ ಹೆಸರಿರುತ್ತದೆ. ಕುಸುಮ್ ಬಿ ಯೋಜನೆಯಡಿ ೩೦% ಕೇಂದ್ರದಿಂದ ಬರುತ್ತದೆ. ಒಪ್ಪದೇ ಹೋದರೆ ಅದೂ ಬರುವುದಿಲ್ಲ. ರೈತರಿಗೆ ಒಳ್ಳೆಯದಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.


ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲಿ ಮುಕ್ತಾಯವಾಗಬಹುದು ಎಂದು ತಿಳಿಸಿದ ಮುಖ್ಯಮಂತ್ರಿಗಳು, ಈ ಭಾಗದ ಸಚಿವರು, ಶಾಸಕರು, ಹಾಗೂ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.


ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಅನುದಾನ ಒದಗಿಸಲಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಕಳೆದ ವರ್ಷ ೫೨೦೦೦ ಕೋಟಿ ರೂ.ಗಳ ಬಂಡವಾಳ ವೆಚ್ಚ ವಿತ್ತು. ಈ ವರ್ಷ ೮೩ ಸಾವಿರ ಕೋಟಿಯಾಗಿದೆ ಎಂದರು. ೩೧೦೦೦ ಕೋಟಿ ಬಂಡವಾಳ ವೆಚ್ಚ ಒಂದು ವರ್ಷದಲ್ಲಿ ಹೆಚ್ಚಾಗಿದೆ. ಹೀಗಿರುವಾಗ ಸರ್ಕಾರ ದಿವಾಳಿ ಹೇಗೆ ಆಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಐವತ್ತು ಸಾವಿರಕ್ಕೂ ಹೆಚ್ಚು ಅನುದಾನ ಒದಗಿಸಲಾಗಿದೆ ಎಂದರು.
ನಮ್ಮ ಸರ್ಕಾರ ಎರಡು ವರ್ಷಗಳಲ್ಲಿ ೫೯೩ ಭರವಸೆಗಳಲ್ಲಿ ೨೪೨ ಭರವಸೆಗಳನ್ನು ಈಡೇರಿಸಿದ್ದು, ಕೇಂದ್ರ ಸರ್ಕಾರ ೬೦೦ ಭರವಸೆಗಳನ್ನು ನೀಡಿ ಶೇ.೧೦ರಷ್ಟನ್ನೂ ಅನುಷ್ಠಾನ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸಂಪುಟದಲ್ಲಿ ಚರ್ಚೆ


ಗ್ರೇಟರ್ ಬೆಂಗಳೂರಿಗೆ ತುಮಕೂರು ಜಿಲ್ಲೆಯನ್ನು ಸೇರಿಸುವ ಕುರಿತು ಗೃಹ ಸಚಿವ ಪರಮೇಶ್ವರ್ ಅವರು ಸಲ್ಲಿಸಿರುವ ಪ್ರಸ್ತಾವನೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.