ಬೆಂಗಳೂರು, ಸೆ. ೨೭- ಕಾಂಗ್ರೆಸ್ ಪಕ್ಷದಲ್ಲಿನ ಒಳ ಜಗಳ ಮುಚ್ಚಿಕೊಳ್ಳಲು ಹಾಗೂ ಕಾಂಗ್ರೆಸ್‌ನಲ್ಲಿ ನಡೆಯಲಿರುವ ಕ್ರಾಂತಿಯನ್ನು ಮುಂದೆ ಹಾಕಲು ಜಾತಿ ಗಣತಿಯನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ದೂರಿದ್ದಾರೆ.
ಬೀದರ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್‌ನಲ್ಲಿ ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಅದೇ ರೀತಿ ಮಾಜಿ ಸಚಿವ ರಾಜಣ್ಣ ಸಹ ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಇದನ್ನೆಲ್ಲಾ ಮುಂದಕ್ಕೆ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರ ವಿರೋಧ ಮಾಡುತ್ತಲೇ ಬಂದಿದೆ. ನೆಹರು ರವರಿಂದ ಹಿಡಿದು ರಾಜೀವ್‌ಗಾಂಧಿಯವರಿಗೂ ಎಲ್ಲಾ ಕಾಂಗ್ರೆಸ್ ನೇತಾರರು ಮೀಸಲಾತಿಗೆ ವಿರೋಧ ಮಾಡಿದ್ದರು. ಈಗ ನೋಡಿದರೆ ಸಿದ್ದರಾಮಯ್ಯನವರು ಜಾತಿ ಗಣತಿಯ ನಾಟಕ ನಡೆಸಿದ್ದಾರೆ ಎಂದು ಅವರು ಕಿಡಿಕಾರಿದರು.
ಸಂಸತ್‌ನಲ್ಲೇ ಕಾಂಗ್ರೆಸ್ ನಾಯಕರುಗಳು ಮೀಸಲಾತಿಗೆ ವಿರೋಧ ಮಾಡಿದ್ದೂ ಇದೆ. ಅಲ್ಲಿ ವಿರೋಧ ಮಾಡುತ್ತಾರೆ, ಇಲ್ಲಿ ನೋಡಿದರೆ ನಾಟಕವಾಡುತ್ತಾರೆ ಎಂದು ಟೀಕಿಸಿದರು.
ಧರ್ಮಾಧಾರಿತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹಾಗಾಗಿ ಕ್ರಿಶ್ಚಿಯನ್ ಬ್ರಾಹ್ಮಣ, ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಮುಸಲ್ಮಾನ ಕ್ರಿಶ್ಚಿಯನ್ ಸೃಷ್ಠಿ ನೂರಕ್ಕೆ ನೂರರಷ್ಟು ರಾಹುಲ್‌ಗಾಂಧಿ, ಸೋನಿಯಾಗಾಂಧಿ ಮೆಚ್ಚಿಸಲು ಮಾಡಿರುವ ಪ್ರಕ್ರಿಯೆ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರದಲ್ಲಿನ ಸಮಸ್ಯೆಗಳ ಬಗ್ಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಜಾತಿ ಗಣತಿ ನಡೆದಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಸ್ತೆಗಳು, ಆರ್ಥಿಕ ಸ್ಥಿತಿ ಎಲ್ಲವೂ ಹದಗೆಟ್ಟು ಹೋಗಿದೆ. ಗುಂಡಿ ಮುಚ್ಚಲಿಕ್ಕೂ ಸರ್ಕಾರದ ಬಳಿ ಹಣ ಇರದ ಪರಿಸ್ಥಿತಿಗೆ ಬಂದು ತಲುಪಿದೆ. ಇದೆಲ್ಲಾ ಮುಚ್ಚಿಕೊಳ್ಳಲು ಜಾತಿ ಗಣತಿ ವಿಚಾರವನ್ನು ಕಾಂಗ್ರೆಸ್ ಸರ್ಕಾರ ಮುಂದು ಮಾಡಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರವೇ ಜನಗಣತಿ ನಡೆಸಲು ತಯಾರಿ ನಡೆಸಿದೆ. ಈಗಾಗಲೇ ತರಬೇತಿ ಕಾರ್ಯಕ್ರಮಗಳು ನಡೆದಿದೆ. ಇಡೀ ದೇಶಾದ್ಯಂತ ತರಬೇತಿ ಕೊಡಬೇಕಾಗುತ್ತದೆ. ಈ ಜನಗಣತಿಯನ್ನು ವ್ಯವಸ್ಥಿತವಾಗಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಯಾವುದೇ ರೀತಿಯ ಸರಿಯಾದ ಸಿದ್ದತೆ ಮಾಡಿಕೊಳ್ಳದೆ ಜಾತಿ ಗಣತಿ ಮಾಡಲು ಹೊರಟಿದೆ. ಜನರು ಇದರ ಬಗ್ಗೆ ಉತ್ಸುಕರಾಗಿಲ್ಲ. ಜನರಿಗೆ ಇದು ಬೋಗಸ್ ಎಂಬುದು ಗೊತ್ತಾಗಿದೆ ಎಂದು ಅವರು ಹೇಳಿದರು.


























