ಬೆಂಗಳೂರು, ಜೂ. ೧೨- ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಹೊಸದಾಗಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಹೊಸದಾಗಿ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ವಿಶೇಷ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಹೊಸದಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುವ ತೀರ್ಮಾನವನ್ನು ಪ್ರಕಟಿಸಿದರು.
ಹಿಂದುಳಿದ ವರ್ಗಗಳ ವಿಧೇಯಕದಂತೆ ಯಾವುದೇ ಆಯೋಗ ನಡೆಸಿದ ಸಮೀಕ್ಷೆಗೆ ೧೦ ವರ್ಷ ಪೂರ್ಣಗೊಂಡ ನಂತರ ಹೊಸದಾಗಿ ಸಮೀಕ್ಷೆ ನಡೆಸಲು ಅವಕಾಶ ಇದೆ. ಹಾಗಾಗಿ ಕಾನೂನಿನ ಅಡಿಯಲ್ಲೇ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಹಿಂದುಳಿದ ವರ್ಗಗಳ ಕಾನೂನಿನಲ್ಲೇ ಇದಕ್ಕೆ ಅವಕಾಶ ಇದೆ. ಅದರಂತೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ಸಮಿತಿಯ ವರದಿ ಈಗಾಗಲೇ ಸಲ್ಲಿಕೆಯಾಗಿದೆ. ಆ ವರದಿಯ ಗತಿ ಏನು ಎಂಬ ಪ್ರಶ್ನೆಗೆ ೧೦ ವರ್ಷಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬದಲಾವಣೆಗಳಾಗಿರುತ್ತವೆ. ಹಾಗಾಗಿ ಆ ವರದಿ ಮಾನ್ಯವಲ್ಲ. ಈ ಹಿನ್ನೆಲೆಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸುವ ತೀರ್ಮಾನ ಮಾಡಿದ್ದೇವೆ ಎಂದರು.
ಪಕ್ಷದ ಹೈಕಮಾಂಡ್ ಸಹ ಹೊಸ ಸಮೀಕ್ಷೆಗೆ ಮಾರ್ಗದರ್ಶನ ಮಾಡಿದೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡೆ ಹೊಸ ಸಮೀಕ್ಷೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದಿನ ಜಾತಿ ಗಣತಿ ವರದಿಯನ್ನು ಪಕ್ಕಕ್ಕಿಟ್ಟು ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಹೈಕಮಾಂಡ್ ಒತ್ತಡಕ್ಕೆ ತಾವು ಮಣಿದಿದ್ದೇವೆ ಎಂಬುದು ಸರಿಯಲ್ಲ. ಹಿಂದುಳಿದ ವರ್ಗಗಳ ಆಯೋಗದ ಕಾನೂನಿನ ಸೆಕ್ಷನ್ -೧೧ ರ ಅಡಿಯಲ್ಲಿ ಸಮೀಕ್ಷೆ ನಡೆಸಲು ಅವಕಾಶ ಇದೆ. ಆ ಕಾನೂನಿನ ಅಡಿಯಲ್ಲೇ ಈ ತೀರ್ಮಾನ ಮಾಡಿದ್ದೇವೆ. ಇದರ ಮಧ್ಯೆ ನಮಗೆ ಹೊಸ ಸಮೀಕ್ಷೆ ಮಾಡಲು ಹೈಕಮಾಂಡ್ ಮಾರ್ಗದರ್ಶನ ಮಾಡಿದೆ ಎಂದು ಅವರು ಹೇಳಿದರು.
ಹೊಸ ಸಮೀಕ್ಷೆಯಿಂದ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಹೊಸ ಸಮೀಕ್ಷೆ ನಡೆಸುವ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದಿಂದಲೂ ಸಲಹೆ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
೯೦ ದಿನಗಳ ಗಡುವು
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಹೊಸದಾಗಿ ನಡೆಸಲು ೯೦ ದಿನಗಳ ಗಡುವನ್ನು ಹಿಂದುಳಿದ ಆಯೋಗಕ್ಕೆ ನೀಡುತ್ತೇವೆ. ತೆಲಂಗಾಣದಲ್ಲಿ ೭೦ ದಿನಗಳಲ್ಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗಿದೆ. ಹಾಗಾಗಿ ರಾಜ್ಯದಲ್ಲೂ ೯೦ ದಿನಗಳ ಗಡುವು ನೀಡಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಹೆಚ್.ಕೆ. ಪಾಟೀಲ್, ಡಾ. ಹೆಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು.