ಬೆಂಗಳೂರು, ಸೆ. ೨೦- ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ಈ ತಿಂಗಳ ೨೨ ರಿಂದ ನಡೆಸಲಿರುವ ಜಾತಿ ಗಣತಿ ನಿಗದಿಯಂತೆ ನಡೆಯಲಿದ್ದು, ಜಾತಿ ಪಟ್ಟಿಯ ಕಾಲಂಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಎಲ್ಲವೂ ಯಥಾ ರೀತಿ ಮುಂದುವರೆಯಲಿದೆ ಎಂದು ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಶ್ಚಿಯನ್ ಹಾಗೂ ಅದರ ಉಪಜಾತಿಗಳ ನಮೂದು ಕಾಲಂಗಳಲ್ಲೂ ಬದಲಾವಣೆಯಿಲ್ಲ. ಇದನ್ನು ಸರ್ಕಾರವಾಗಲೀ, ಆಯೋಗವಾಗಲೀ, ಯಾರೇ ಆಗಲೀ ಸೇರಿಸಿಲ್ಲ. ಈ ಹಿಂದೆ ಕಾಂತರಾಜು ಆಯೋಗ ಸಮೀಕ್ಷೆ ನಡೆಸಿದಾಗ ಕ್ರಿಶ್ಚಿಯನ್ ಧರ್ಮದವರು ಉಪಜಾತಿಗಳನ್ನು ನಮೂದು ಮಾಡಿದ್ದಾರೆ. ಆಗಿನಿಂದಲೇ ಕ್ರಿಶ್ಚಿಯನ್ ಉಪಜಾತಿಗಳು ಇವೆ. ಅವುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಅಷ್ಟೇ ಎಂದರು.
ಜಾತಿ ಗಣತಿ ಕಾಲಂನಲ್ಲಿ ಜನತೆ ತಮಗೆ ಅನಿಸಿದ್ದನ್ನು ಬರೆಸಬಹುದು. ಹೀಗೆ ಬರೆಸಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದರು.
ಜಾತಿ ಗಣತಿ ಪಟ್ಟಿಯಲ್ಲಿ ೩೩೧ ಜಾತಿಗಳನ್ನು ಹೊಸದಾಗಿ ಸೃಷ್ಠಿಸಲಾಗಿದೆ ಎಂಬ ಟೀಕೆಗಳು ಸರಿಯಲ್ಲ. ಜನತೆಯ ಮನವಿ ಮೇರೆಗೆ ಆಯೋಗ ಹೊಸ ಜಾತಿಗಳನ್ನು ಉಲ್ಲೇಖಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರ ನಡೆಸುತ್ತಿರುವುದು ಜಾತಿ ಗಣತಿಯಲ್ಲ. ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಅಷ್ಟೇ. ನಿಗದಿಯಂತೆ ಸೆ. ೨೨ ರಿಂದ ಅ. ೭ರ ವರೆಗೂ ಸಮೀಕ್ಷೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಕ್ರಿಶ್ಚಿಯನ್ ಬ್ರಾಹ್ಮಣ ಎಂಬ ಪದವನ್ನು ಸಚಿವ ದಿನೇಶ್ ಗುಂಡೂರಾವ್ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊದಲು ಸಮೀಕ್ಷೆ ನಡೆದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿ. ಆ ನಂತರ ಸಚಿವರು, ಶಾಸಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಲಹೆ ನೀಡಲಿ. ಅದನ್ನು ಯಾವ ರೀತಿ ಪರಿಗಣಿಸಬೇಕು ಎಂಬುದನ್ನು ಸರ್ಕಾರ ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು.




























