
ಕಲಬುರಗಿ:ಜೂ.14: ಕಾಂಗ್ರೆಸ್ ಪಕ್ಷವು ಮೀಸಲಾತಿ ವಿರೋಧಿಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಯಾವತ್ತೂ ಸಾಮಾಜಿಕ ಬದ್ಧತೆ ತೋರಿಲ್ಲ. ಈಗಲೂ ಮೀಸಲಾತಿ-ಜಾತಿ ಗಣತಿ ಎನ್ನುತ್ತ ರಾಜಕೀಯ ನಾಟಕ ಮಾಡುತ್ತಿದೆ ಅಷ್ಟೇ ಎಂದು ದೂರಿದರು.
ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರು ಕಾಲದಿಂದಲೂ ಕಾಂಗ್ರೆಸ್ ಮೀಸಲಾತಿ ವಿರೋಧಿ ಆಗಿಯೇ ನಡೆದುಕೊಂಡಿದೆ. ಮೀಸಲಾತಿ ವಿರೋಧಿಸಿ ನೆಹರು ಪತ್ರವನ್ನೇ ಬರೆದಿದ್ದರು. ಇನ್ನು, ರಾಜೀವ್ ಗಾಂಧಿ ಸಹ ಮೀಸಲಾತಿ ವಿರುದ್ಧ ಸಂಸತ್‍ನಲ್ಲಿ ಸುದೀರ್ಘ ಭಾಷಣ ಬಿಗಿದಿದ್ದರು ಎಂದು ಅವರು ಉಲ್ಲೇಖಿಸಿದರು.
ಈಗ ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರೆಚಲು ನೋಡುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ಜಾತಿ ಗಣತಿ ವಿಷಯ ಹರಿಬಿಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಇತಿಹಾಸದಲ್ಲಿ ಯಾವತ್ತೂ ಕಾಂಗ್ರೆಸ್ ಮುಖಂಡರು ಮೀಸಲಾತಿ ಪರ ನಿಂತಿದ್ದಿಲ್ಲ. ಸಂವಿಧಾನದಲ್ಲಿ ಅಂಬೇಡ್ಕರ್ ಮೀಸಲಾತಿ ಕಲ್ಪಿಸಿದರೆ, ಕಾಂಗ್ರೆಸ್ ಅಧಿನಾಯಕರು ಸಂಸತ್ ನಲ್ಲಿ ಮೀಸಲಾತಿ ವಿರೋಧಿಸಿ ಉದ್ದುದ್ದ ಭಾಷಣ ಮಾಡಿದರು. ಈಗ ಜಾತಿ ಗಣತಿ, ಮೀಸಲಾತಿ ಎನ್ನುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ ಸಚಿವರು, ಇದೊಂದು ರಾಜಕೀಯ ನಾಟಕವಾಗಿದೆ ಎಂದರು.
ಇನ್ನು ವಿಮಾನ ದುರಂತ ದುರದೃಷ್ಟಕರ ಅವಘಡ. ಈ ದುರ್ಘಟನೆಯಲ್ಲಿ ಅನೇಕರ ಸಾವು ಸಂಭವಿಸಿರುವುದು ತೀವ್ರ ದುಃಖ ತರಿಸಿದೆ. ವಿಮಾನ ದುರಂತ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಡಿಜಿಸಿಎ ಸಮಗ್ರ ತನಿಖೆ ನಡೆಸಲಿದೆ. ಭವಿಷ್ಯದಲ್ಲಿ ಇಂಥ ಅವಘಡಗಳು ಘಟಿಸದಂತೆ ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.
ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಕೇಂದ್ರ ಸರ್ಕಾರ, ವಿಮಾ ಕಂಪೆನಿ ಮತ್ತು ವಿಮಾನ ಸಂಸ್ಥೆಗಳಿಂದ ಸಮರ್ಪಕ ಪರಿಹಾರ ನೀಡಲಾಗುತ್ತದೆ. ಅಲ್ಲದೇ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಾ. ಅವಿನಾಶ್ ಜಾಧವ್, ಬಸವರಾಜ್ ಮತ್ತಿಮೂಡ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಮಾಜಿ ಸಚಿವ ಮುರುಗೇಶ್ ನಿರಾಣಿ ಮುಂತಾದವರು ಉಪಸ್ಥಿತರಿದ್ದರು.