ಡಿಸೆಂಬರ್ ಒಳಗೆ ವರದಿ ಸಲ್ಲಿಕೆ
ಬೆಂಗಳೂರು,ಸೆ.೧೨:ರಾಜ್ಯದಲ್ಲಿ ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಆಯೋಗದಿಂದ ಇದೇ ಸೆ. ೨೨ ರಿಂದ ಅ.೭ರ ವರೆಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಪ್ರಕಟಿಸಿ ಸಮೀಕ್ಷೆಯ ಸ್ವರೂಪದ ಬಗ್ಗೆ ಸಮಗ್ರ ವಿವರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮೀಕ್ಷಾ ವರದಿಯನ್ನು ಡಿಸೆಂಬರ್ ಒಳಗೆ ಆಯೋಗ ಸಲ್ಲಿಸಲಿದೆ ಎಂದರು.
ಎಲ್ಲ ಜಾತಿ ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ, ಮಾತ್ರ ಸಾಮಾಜಿಕ ನ್ಯಾಯದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ಹಾಗಾಗಿ ರಾಜ್ಯದ ೭ ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತದೆ. ಅತ್ಯಂತ ವೈಜ್ಞಾನಿಕವಾಗಿ ಆದಷ್ಟು ಜಾಗ್ರತೆಯಿಂದ ಸಮೀಕ್ಷೆ ನಡೆಸಿ ವರದಿ ಕೊಡುವಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಇ ಸಮೀಕ್ಷಾ ಕಾರ್ಯಕ್ಕೆ ೧ ಲಕ್ಷ ೮೫ ಸಾವಿರ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ದಸರಾ ರಜವನ್ನು ಗಮನದಲ್ಲಿಟ್ಟುಕೊಂಡು ಸೆ. ೨೨ ರಿಂದ ಅ. ೭ರವರೆಗೆ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತದೆ. ಪ್ರತಿ ಶಿಕ್ಷಕರಿಗೆ ಸಮೀಕ್ಷೆ ೧೨೦ ರಿಂದ ೧೫೦ ಮನೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಸಮೀಕ್ಷಾ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆಯಲ್ಲಿ ೬೦ ಪ್ರಶ್ನೆಗಳನ್ನು ಕೇಳಲಾಗುವುದು. ಎಲ್ಲರೂ ಪ್ರತಿಯೊಂದು ಪ್ರಶ್ನೆಗಳಿಗೆ ಸಮರ್ಪಕಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಮೀಕ್ಷಾ ಕಾರ್ಯ ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ನಡೆಸಿದ ಮಾದರಿಯಲ್ಲೇ ನಡೆಯಲಿದೆ. ಆನ್‌ಲೈನ್‌ಮೂಲಕವೂ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಯೋಗದ ಸಹಾಯವಾಣಿ ಸಂಖ್ಯೆ-೮೦೫೦೭೭೦೦೦೪ಕ್ಕೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಕುರಿತು ಯಾವುದೇ ದೂರು ಮತ್ತು ಮಾಹಿತಿಯನ್ನು ಪಡೆಯಬಹುದು ಎಂದು ಅವರು ಹೇಳಿದರು.
ಸಮೀಕ್ಷಾ ಪೂರ್ವದಲ್ಲಿ ಪ್ರತಿಯೊಂದು ಮನೆಯ ವಿದ್ಯುತ್ ಮೀಟರ್ ಆಧಾರದಲ್ಲಿ ಮನೆಯ ಜಿಯೋ ಟ್ಯಾಗ್ ಮಾಡಿ ಯುಎಚ್‌ಐಡಿ ವಿಶೇಷ ಸಂಖ್ಯೆಯನ್ನು ನಮೂದಿಸಲಾಗುವುದು. ಈಗಾಗಲೇ ೧ ಕೋಟಿ ೫೫ ಲಕ್ಷ ಮನೆಗಳಿಗೆ ಯುಎಚ್‌ಐಡಿ ಸಂಖ್ಯೆಯನ್ನು ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕಇಲ್ಲದ ಮನೆಯ ಸಮೀಕ್ಷೆಯನ್ನು ಮಾಡಲಾಗುವುದು. ಸಮೀಕ್ಷಾ ಸಂದರ್ಭದಲ್ಲಿ ಪಡಿತರ ಚೀಟಿ ಮತ್ತು ಆಧಾಋಕಾರ್ಡ್‌ನ್ನು ಮೊಬೈಲ್‌ಸಂಖ್ಯೆಗೆ ಲಿಂಕ್ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದರು.
ಈ ಸಮೀಕ್ಷೆಗಾಗಿ ರಾಜ್ಯಸರ್ಕಾರ ಸುಮಾರು ೪೨೦ ಕೋಟಿ ರೂ.ನ್ನು ಒದಗಿಸಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಹಣವನ್ನೂ ನೀಡುತ್ತೇವೆ.ಸಮೀಕ್ಷೆ ನಡೆಸುವ ಶಿಕ್ಷಕರಿಗೆ ತಲಾ ೨೦ ಸಾವಿರ ಗೌರವ ಸಂಭಾವನೆಯನ್ನು ನೀಡಲಾಗುವುದು. ಶಿಕ್ಷಕರ ಸಂಭಾವನಗೆ ೩೨೫ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅವರು ಹೇಳಿದರು.
ಆಯೋಗ ವೈಜ್ಞಾನಿಕವಾಗಿ ಯಾವುದೇ ಲೋಪವಾಗದಂತೆ ಸಮೀಕ್ಷೆ ನಡೆಸಬೇಕು. ನಿಗದಿತ ಅವಧಿಯ ಒಳಗಾಗಿ ಸಮೀಕ್ಷಾ ಕಾರ್ಯ ನಡೆಸಬೇಕು ಎಂದ ಅವರು, ಡಿಸೆಂಬರ್ ಒಳಗೆ ಸರ್ಕಾರದ ಕೈಸೇರುವ ನಿರೀಕ್ಷೆ ಇದೆ ಎಂದರು.
ಈ ಹಿಂದೆ ೨೦೧೫ ರಲ್ಲಿ ಕಾಂತ್‌ರಾಜ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಶೈಕ್ಷಣಿಕ,ಸಾಮಾಜಿಕ ಸಮೀಕ್ಷೆಯನ್ನು ನಡೆಸಲಾಗಿತ್ತು. ಕಾಂತ್‌ರಾಜ್ ಅವರು ವರದಿಯನ್ನು ಸಲ್ಲಿಸಿ ೧೦ ವರ್ಷ ಆದ ಕಾರಣ ಹೊಸದಾಗಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಅವರು ಹೇಳಿದರು.
ಯಾರೂ ಸಮೀಕ್ಷೆಯಿಂದ ಹೊರಗುಳಿಯಬಾರದು. ಆ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾತಿ ಹೇಳಿಕೊಳ್ಳಲು ಕಷ್ಟವಾದರೆ ಸಹಾಯವಾಣಿಗೆ ಕರೆ ಮಾಡಿ ಜಾತಿ ಹೇಳಬಹುದು.ಆಶಾ ಕಾರ್ಯಕರ್ತರು ನಾಳೆಯಿಂದಲೇ ಮನೆ ಮನೆಗೆ ಹೋಗಿ ೬೦ ಪ್ರಶ್ನೆಗಳ ನಮೂನೆಯನ್ನು ಪ್ರತಿ ಮನೆಗೆ ತಲುಪಿಸುತ್ತಾರೆ. ನಂತರ ಶಿಕ್ಷಕರು ಸಮೀಕ್ಷೆಗೆ ಹೋಗುತ್ತಾರೆ. ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದುದ್ದನ್ನು ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ಎಲ್ಲವನ್ನೂ ತೀರ್ಮಾನಿಸುತ್ತದೆ ಎಂದರು.
ಅಮೆರಿಕಾದಲ್ಲೂ ಕರಿಯರಿಗೆ ಅಫೆರ್‌ಮೆಟಿವ್ ಆಕ್ಷನ್ ಅಂತ ಇದೆ. ನಮ್ಮಲ್ಲಿ ಮೀಸಲಾತಿ ಇದೆ, ನಾವು ಬಡತನ, ನಿರುದ್ಯೋಗ, ಅನರಕ್ಷತೆ ಹೋಗಲಾಡಿಸಲು ಸಂವಿಧಾನದ ಪ್ರಕಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಅಸಮಾನತೆಯನ್ನು ತೊಲಿಸಲು ಸ್ವಾತಂತ್ರ್ಯ ದೊರೆತು ಇಷ್ಟು ವಷಗಳಾದರು ಸಾಧ್ಯವಾಗಿಲ್ಲ. ಸಮಾನತೆಯನ್ನು ಸಮಾನ ಅವಕಾಶವನ್ನು ಒದಗಿಸಲು ಜನರ ಆರ್ಥಿಕ ಸ್ಥಿತಿ, ಶೈಕ್ಷಣಿಕ ಸ್ಥಿತಿ ಜಾತಿ ಧರ್ಮ ಎಲ್ಲದರ ಮಾಹಿತಿ ಬೇಕಿದೆ. ಹಾಗಾಗಿಯೇ ಈ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ, ನಾವು ಅಸಮಾನತೆಯನ್ನು ತೊಲಗಿಸಲೇಬೇಕು.ಹಾಗಾಗಿ ಸಮಾನ ಅವಕಾಶ ಒದಗಿಸಲು ದತ್ತಾಂಶಗಳ ಮಾಹಿತಿ ಅಗತ್ಯವಿದೆ. ಈ ಸಮೀಕ್ಷೆಯಿಂದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಶಿವರಾಜ್‌ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಡು, ಆಯೋಗದ ಸದಸ್ಯರುಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್‌ಅಹ್ಮದ್ ಉಪಸ್ಥಿತರಿದ್ದರು.



























