ಸೆ. ೨೨ ರಿಂದ ರಾಜ್ಯದಲ್ಲಿ ಜಾತಿಗಣತಿ

ಬೆಂಗಳೂರು,ಆ.೨೯- ರಾಜ್ಯದಲ್ಲಿ ಸೆಪ್ಟೆಂಬರ್ ೨೨ರಿಂದ ಅಕ್ಟೋಬರ್ ೭ರ ವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸೆಪ್ಟಂಬರ್ ೨೨ ರಿಂದ ಅಕ್ಟೋಬರ್ ೭ರ ವರೆಗೆ ೧೫ ದಿನಗಳ ಕಾಲ ಸಮೀಕ್ಷೆ ನಡೆಯಲಿದ್ದು ಅಕ್ಟೋಬರ್ ಕೊನೆಯ ಒಳಗಾಗಿ ಸಮೀಕ್ಷೆ ವರದಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ

ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಖಾತ್ರಿಪಡಿಸಬೇಕು . ಹಾಗೆಯೇ, ಈ ಬಾರಿ ಮೊಬೈಲ್ ಆಪ್ ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು. ರಾಜ್ಯದ ಎಲ್ಲಾ ೭ ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದಿದ್ದಾರೆ.

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಯಾವುದೇ ಜಾತಿ ಬಿಟ್ಟುಹೋಗಿದ್ದರೆ ಮಾಹಿತಿ ನೀಡಲು ಸೆ.೧ರವರೆಗೆ ಅವಕಾಶ –
ಸೆ.೨೨ರಿಂದ ಅಕ್ಟೋಬರ್ ೭ರ ವರೆಗೆ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ, ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ, ಅದರ ಕುರಿತಂತೆ ಮಾಹಿತಿ ನೀಡಲು ಸೆ.೧ ರವರೆಗೆ ಅವಕಾಶ ನೀಡಲಾಗಿದೆ.

ಈ ನಡುವೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು, ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆಪ್ಟೆಂಬರ್ ೧ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಯಾವುದೇ ಜಾತಿ, ಉಪ ಜಾತಿಗಳು ಬಿಟ್ಟು ಹೋಗಿದ್ದರೆ, ಅಂತಹ ಅಂಶಗಳ ಬಗ್ಗೆ ಸಲಹೆ, ಸೂಚನೆಗಳು ಇದ್ದಲ್ಲಿ, ೭ ದಿನಗಳ ಒಳಗೆ ನೀಡಲು ಕೋರಲಾಗಿತ್ತು. ಆದರೆ, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಸಂಗ್ರಹಿಸಲಾದ ಜಾತಿ,ಉಪಜಾತಿಗಳ ಪಟ್ಟಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಸಮೀಕ್ಷೆಗಾಗಿ ಮಾತ್ರ ಉಪಯೋಗಿಸಲಾಗುವುದು ಎಂದು ಹೇಳಲಾಗಿದೆ.

ಸಾರ್ವಜನಿಕರು ತಮ್ಮ ಸಲಹೆ, ಸೂಚನೆ, ಮನವಿಗಳನ್ನು ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂಬರ್ ೧೬, ಡಿ. ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಪ್ರದೇಶ, ವಸಂತ ನಗರ, ಬೆಂಗಳೂರು ಅಥವಾ ಞsಛಿbಛಿb@gmಚಿiಟ.ಛಿom ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ ೦೮೦-೨೯೫೦೬೬೬೮ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.