ಬೆಂಗಳೂರು, ಅ. ೪- ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಇಂದಿನಿಂದ ಆರಂಭವಾಗಿದ್ದು, ಸಮೀಕ್ಷೆಗೆ ಮೊದಲ ದಿನವೇ ಹಲವು ವಿಘ್ನ ಎದುರಾಗಿದ್ದು, ಹಲವೆಡೆ ಆಪ್ ಕೆಲಸ ಮಾಡದೆ, ಸಿಗ್ನಲ್ ಸಿಗದೆ ತಾಂತ್ರಿಕ ತೊಂದರೆಗಳಾಗಿದ್ದು, ಸಮೀಕ್ಷೆ ನಡೆಸುವವರು ಎಲ್ಲವನ್ನು ಸರಿಪಡಿಸುವಂತೆ ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರರಾವ್ ಹೇಳಿದ್ದರು. ಅದರಂತೆ ಇಂದು ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ತಾಂತ್ರಿಕ ತೊಂದರೆಯಿಂದ ಆರಂಭದಲ್ಲೇ ವಿಘ್ನ ಎದುರಾಗಿದೆ.
ಆಪ್ ಡೌನ್‌ಲೋಡ್ ಆಗದಿರುವುದು, ಕೆಲವೆಡೆ ತಾಂತ್ರಿಕ ಸಮಸ್ಯೆಗಳಾಗಿದ್ದು, ಇನ್ನು ಕೆಲವೆಡೆ ಇಂಟರ್‌ನೆಟ್ ಸಿಗ್ನಲ್‌ಗಳು ಸಿಗದೆ ಸಮೀಕ್ಷಾಕಾರರು ತೊಂದರೆಗೆ ಸಿಲುಕಿದರು. ಸರಿಯಾದ ವ್ಯವಸ್ಥೆ ಇಲ್ಲದೆ ಸಮೀಕ್ಷಾ ಕಾರ್ಯ ನಡೆಸಲು ಆಗುತ್ತಿಲ್ಲ. ತೊಂದರೆಗಳನ್ನು ಸರಿಪಡಿಸಿ ಎಂದು ೨೦೦ಕ್ಕೂ ಹೆಚ್ಚು ಸಮೀಕ್ಷಾಕಾರರು ಮಲ್ಲೇಶ್ವರದ ಜಿಬಿಎ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸರ್ಕಾರಿ ನೌಕರರು ಎಂದಾಕ್ಷಣ ನಮ್ಮ ಮೇಲೆ ಏನು ಮಾಡಲು ಬೇಕಾದರೂ ಸಾಧ್ಯವೇ, ತಾಂತ್ರಿಕ ದೋಷ ಸರಿಪಡಿಸದೆ ನಾವು ಸಮೀಕ್ಷೆ ನಡೆಸುವುದಾದರೂ ಹೇಗೆ ಎಂದು ಪ್ರತಿಭಟನಾನಿರತ ಸಮೀಕ್ಷಾಕಾರರು ಪ್ರಶ್ನಿಸಿದರು.
ನಾವು ಪ್ರಶ್ನಾವಳಿ, ಅರ್ಜಿ ಎಲ್ಲವನ್ನು ಸ್ವೀಕರಿಸಿದ್ದೇವೆ. ಆದರೆ ಆಪ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದನ್ನು ಸರಿಪಡಿಸಿ ಎಂದು ಒತ್ತಾಯಿಸುತ್ತಿದ್ದೇವೆ. ಹಾಗಾಗಿ ನಾವು ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತ ಸಮೀಕ್ಷೆಗೆ ನಿಯೋಜನೆಗೊಂಡಿರುವ ಸರ್ಕಾರಿ ನೌಕರರು ಹೇಳಿದರು.
ಬೆಂಗಳೂರಿನ ಹಲವೆಡೆ ಈ ರೀತಿಯ ಸಮಸ್ಯೆಗಳಾಗಿದ್ದು, ಜಾತಿಗಣತಿಯ ಗೊಂದಲ ರಾಜಧಾನಿ ಬೆಂಗಳೂರಿನಲ್ಲೂ ಮುಂದುವರೆದಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸಮೀಕ್ಷೆಗಾಗಿ ಸುಮಾರು ೧೭೫೦೦ ಸಮೀಕ್ಷಾದಾರರನ್ನು ನೇಮಿಸಲಾಗಿದ್ದು, ಇವರಿಗೆ ತರಬೇತಿಯನ್ನು ನೀಡಲಾಗಿದೆ. ಪ್ರತಿ ಸಮೀಕ್ಷಾದಾರರಿಗೆ ೩೦೦ ಮನೆಗಳನ್ನು ನಿಯೋಜಿಸಲಾಗಿದೆ ಎಂದು ಜಿಬಿಎ ಆಯುಕ್ತರು ಹೇಳಿದ್ದರಾದರೂ ತಾಂತ್ರಿಕ ತೊಂದರೆಗಳಿಂದ ಬೆಂಗಳೂರಿನಲ್ಲಿ ಮೊದಲ ದಿನ ಸಮೀಕ್ಷೆ ಸರಾಗವಾಗಿ ನಡೆದಿಲ್ಲ.
ಸಮೀಕ್ಷೆದಾರರಿಗೆ ಗುರುತಿನ ಚೀಟಿ, ಕ್ಯಾಪ್, ಪ್ಯಾಡ್, ಕೈಪಿಡಿ, ಸ್ವಯಂ ಘೋಷಣಾ ಪತ್ರ ಎಲ್ಲವನ್ನೂ ನೀಡಲಾಗಿದೆಯಾದರೂ ತಾಂತ್ರಿಕ ಸಮಸ್ಯೆಗಳು ಸಮೀಕ್ಷೆದಾರರಿಗೆ ಸಮೀಕ್ಷೆ ಸಮರ್ಪಕವಾಗಿ ನಡೆಸಲು ಅಡ್ಡಿಯಾದವು. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿವೆ.
ಡಿಸಿಎಂ ಮನೆಯಲ್ಲಿ ಸಮೀಕ್ಷೆ: ಮಾಹಿತಿ ಸಂಗ್ರಹ
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇಂದಿನಿಂದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಮನೆಗೆ ಸಮೀಕ್ಷೆದಾರರು ತೆರಳಿ ಮಾಹಿತಿ ಸಂಗ್ರಹಿಸಿದರು.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನನ್ನ ಮನೆಗೆ ಸಮೀಕ್ಷೆದಾರರು ಬಂದಿದ್ದರು. ನಾನು ಮಾಹಿತಿ ನೀಡಿದ್ದೇನೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಠಿಯಿಂದ ಎಲ್ಲಾ ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದರು.
ಸಮೀಕ್ಷೆಯಲ್ಲಿ ಹೆಚ್ಚು ಪ್ರಶ್ನೆಗಳಿರುವುದು ನನ್ನ ಗಮನಕ್ಕೆ ಇಂದು ಬಂದಿದೆ. ಕಡಿಮೆ ಪ್ರಶ್ನೆಗಳಿರಬೇಕಿತ್ತು. ಬೆಂಗಳೂರಿನಲ್ಲಿ ಜನರಿಗೆ ಇಷ್ಟೊಂದು ಪ್ರಶ್ನೆಗೆ ಉತ್ತರಿಸುವ ತಾಳ್ಮೆ ಇರಲ್ಲ. ಎಲ್ಲಾ ಪ್ರಶ್ನೆಗೂ ಮಾಹಿತಿ ಕೊಡಬೇಕು ಎಂದೇನಿಲ್ಲ. ಉದ್ಭವಿಸಲ್ಲ, ಮಾಹಿತಿ ಕೊಡಲ್ಲ ಎಂದು ಬರೆಸಬಹುದು. ನ್ಯಾಯಾಲಯ ಸಹ ಎಲ್ಲ ಮಾಹಿತಿಗೂ ಬಲವಂತ ಮಾಡಬಾರದು ಎಂದು ಹೇಳಿದೆ. ನಮಗೆ ಅಗತ್ಯವಿರುವ ಮಾಹಿತಿಯನ್ನು ನೀಡಿದರೆ ಒಳ್ಳೆಯದು. ಸಮೀಕ್ಷೆದಾರರಿಗೆ ಬೆಂಗಳೂರಿನ ಜನತೆ ಸಹಕಾರ ನೀಡಿ ಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.



























