ಜಾತಿ ಜನಗಣತಿ:ಎನ್‌ಡಿಎ ಸಿಎಂಗಳ ಮಹತ್ವದ ಸಭೆ

ನವದೆಹಲಿ,ಮೇ.೨೫- ರಾಷ್ಟ್ರೀಯ ಭದ್ರತೆ, ಮುಂಬರುವ ಜಾತಿ, ಜನಗಣತಿ ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳಲ್ಲಿ ಆಡಳಿತ ತಂತ್ರಗಳು, ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ಆಧ್ಯತೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಉನ್ನತ ಮಟ್ಟದ ಸಭೆ ನಡೆಸಿದರು

ಸಭೆಯಲ್ಲಿ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಸುಮಾರು ೨೦ ಮುಖ್ಯಮಂತ್ರಿಗಳು ಮತ್ತು ೧೮ ಉಪ ಮುಖ್ಯಮಂತ್ರಿಗಳು ಭಾಗವಹಿಸಿದ್ದಾರೆ. ಇವರ ಜೊತೆಗೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಸಹ ಚರ್ಚೆಗಳಲ್ಲಿ ಭಾಗವಹಿಸಿದ್ದು ದಿನಪೂರ ಚರ್ಚೆ ನಡೆಯಲಿದೆ.

ರಾಷ್ಟ್ರೀಯ ಭದ್ರತೆ ಮತ್ತು ಆಪರೇಷನ್ ಸಿಂಧೂರ್. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಭಾರತ ಇತ್ತೀಚೆಗೆ ನಡೆಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್‍ನ ಯಶಸ್ಸಿಗಾಗಿ ಸಶಸ್ತ್ರ ಪಡೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಲು ಸಭೆ ನಿರ್ಣಯ ಅಂಗೀಕರಿಸಲು ನಿರ್ಧರಿಸಿದೆ.

ದೇಶದಲ್ಲಿ ಸಾಮಾಜಿಕ ನ್ಯಾಯದತ್ತ ಮಹತ್ವದ ಹೆಜ್ಜೆ ಗುರುತಿಸುವ ಮುಂಬರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸೇರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಭೆಯಲ್ಲಿ ಶ್ಲಾಘಿಸಿ ಅಂಗೀಕರಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ

ಎನ್‌ಡಿಎ ಮೈತ್ರಿಕೂಟದಾದ್ಯಂತ ಸಹಯೋಗ ಬೆಳೆಸುವ ಮತ್ತು ನವೀನ ಆಡಳಿತ ಮಾದರಿ ಹಂಚಿಕೊಳ್ಳುವ ಗುರಿ ಹೊಂದಿರುವ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜ್ಯಗಳಿಂದ ಪರಿಣಾಮಕಾರಿ ಉಪಕ್ರಮಗಳು ಮತ್ತು ಯೋಜನೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಗಡಿಯುದ್ದಕ್ಕೂ ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ನಂತರ ರಾಷ್ಟ್ರೀಯ ಭದ್ರತೆಯ ಕುರಿತು ಎನ್‌ಡಿಎ ಸರ್ಕಾರದ ನಿಲುವನ್ನು ಬಲಪಡಿಸಲು ಮತ್ತು ಏಕೀಕೃತ ಸಂದೇಶವನ್ನು ಕಳುಹಿಸಲು ಈ ಸಭೆಯನ್ನು ಸಂಘಟಿತ ಪ್ರಯತ್ನವೆಂದು ನೋಡಲಾಗುತ್ತಿದೆ.

’ವಿಕ್ಷಿತ್ ರಾಜ್ಯಕ್ಕಾಗಿ ವಿಕ್ಷಿತ್ ಭಾರತ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ೧೦ ನೇ ಆಡಳಿತ ಮಂಡಳಿ ಸಭೆಯ ಒಂದು ದಿನದ ನಂತರ ಈ ಸಭೆ ನಡೆದಿದ್ದು ಮಹತ್ವ ಪಡೆದುಕೊಂಡಿದೆ.

ಯಾರೆಲ್ಲಾ ಭಾಗಿ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎನ್‌ಡಿಎ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ. ನಡ್ಡಾ ಪಾಲ್ಗೊಂಡಿದ್ಧಾರೆ.

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ ಮತ್ತು ಉಪಮುಖ್ಯಮಂತ್ರಿಗಳಾದ ಟಿ.ಆರ್. ಝೆಲಿಯಾಂಗ್ ಮತ್ತು ಯಂತುಂಗೊ ಪ್ಯಾಟನ್ ಸೇರಿದಂತೆ ೨೦ ಮುಖ್ಯಮಂತ್ರಿಗಳು, ೧೮ ಉಪ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.