ಜಾತಿ ನಿಂದನೆ ಆರೋಪ, ಎಫ್‌ಐಆರ್ ದಾಖಲು

ಗುರುಗ್ರಾಮ,ಜೂ.೨೩-ಹರಿಯಾಣದ ಗುರುಗ್ರಾಮದಲ್ಲಿ, ಇಂಡಿಗೋ ಏರ್‌ಲೈನ್ಸ್‌ನ ತರಬೇತಿ ಪೈಲಟ್ ಒಬ್ಬರು ವಿಮಾನದ ಕ್ಯಾಪ್ಟನ್ ಸೇರಿದಂತೆ ೩ ಜನರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. ಸಭೆಯಲ್ಲಿ ತಮ್ಮನ್ನು ಅವಮಾನಿಸಲಾಗಿದೆ ಮತ್ತು ಅವರ ವಿರುದ್ಧ ಜಾತಿವಾದಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ತರಬೇತಿ ಪೈಲಟ್ ಆರೋಪಿಸಿದ್ದಾರೆ.ಪರಿಶಿಷ್ಟ ಜಾತಿಗೆ ಸೇರಿದ ೩೫ ವರ್ಷದ ಪೈಲಟ್ ಪೊಲೀಸ್ ದೂರು ದಾಖಲಿಸಿದ್ದಾರೆ.


ಇಂಡಿಗೊ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.ಬೆಂಗಳೂರು ನಗರದ (ಕರ್ನಾಟಕ) ಶೋಭಾ ಸಿಟಿ ಸ್ಯಾಂಟೊರಿನಿಯಲ್ಲಿ ವಾಸಿಸುವ ೩೫ ವರ್ಷದ ಶರಣ್ ಜಾತಿ ನಿಂದನೆ ಮಾಡಿ ನೀನು ವಿಮಾನ ಹಾರಾಟ ನಡೆಸಲು ಯೋಗ್ಯನಲ್ಲ, ನೀನು ಹಿಂತಿರುಗಿ ಚಪ್ಪಲಿ ಹೊಲಿಯುವ ಕೆಲಸ ಮಾಡು. ಗುರುಗ್ರಾಮ್‌ನಲ್ಲಿ ನಡೆದ ಸಭೆಯ ನಂತರ, ತರಬೇತಿ ಪೈಲಟ್ ಬೆಂಗಳೂರಿನಲ್ಲಿ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.


ಕರ್ನಾಟಕ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ಗುರುಗ್ರಾಮ್‌ಗೆ ಕಳುಹಿಸಿದ್ದಾರೆ. ಇದರ ನಂತರ, ಗುರುಗ್ರಾಮ್‌ನ ಡಿಎಲ್‌ಎಫ್ ಹಂತ-೧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.


ಏಪ್ರಿಲ್ ೨೮ ರಂದು ಗುರುಗ್ರಾಮ ಇಂಡಿಗೋ ಕಚೇರಿಯಲ್ಲಿ ನಡೆದ ಸಭೆಯನ್ನು ತರಬೇತಿ ಪೈಲಟ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ೩೦ ನಿಮಿಷಗಳ ಕಾಲ ನಡೆದ ಸಭೆಯಲ್ಲಿ ನೀವು ವಿಮಾನ ಹಾರಿಸಲು ಯೋಗ್ಯರಲ್ಲ, ನೀವು ಹಿಂತಿರುಗಿ ಚಪ್ಪಲಿ ಹೊಲಿಯಬೇಕು. ನೀವು ಇಲ್ಲಿ ಭದ್ರತಾ ಸಿಬ್ಬಂದಿಯಾಗಲು ಸಹ ಯೋಗ್ಯರಲ್ಲ ಎಂದು ಹೇಳಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ರಾಜೀನಾಮೆ ನೀಡುವಂತೆ ಒತ್ತಾಯಿಸುವ ಉದ್ದೇಶದಿಂದ ಕಿರುಕುಳ ನೀಡಲಾಗಿದೆ ಎಂದು ತರಬೇತಿ ಪೈಲಟ್ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿ ತನ್ನ ಗುರುತನ್ನು ಅವಮಾನಿಸುವ ಗುರಿಯನ್ನು ಈ ಅವಹೇಳನಕಾರಿ ಹೇಳಿಕೆಗಳು ಹೊಂದಿವೆ ಎಂದು ಅವರು ಆರೋಪಿಸಿದ್ದಾರೆ.