
ಕಲಬುರಗಿ,ಆ.21: ಬಸ್ಸಿನಲ್ಲಿದ್ದ ವಿದ್ಯಾರ್ಥಿ ಪ್ರಯಾಣಿಕನೊಬ್ಬನಿಗೆ ಇ.ಟಿ.ಎಂ. ಯಂತ್ರದ ಮೂಲಕ ಟಿಕೆಟ್ ವಿತರಿಸಲು ಅವಕಾಶ ಮಾಡಿಕೊಟ್ಟು ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-1ರ ವ್ಯಾಪ್ತಿಯ ಕಾಳಗಿ ಘಟಕದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಂಸ್ಥೆಯ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಆಗಸ್ಟ್ 18 ರಂದು ಕಾಳಗಿ-ಕಲಬುರಗಿ-ಮಂಗಲಗಿ ಮಾರ್ಗದ ಕೆ.ಎ-32 ಎಫ್-2066 ಬಸ್‍ನಲ್ಲಿ ಕರ್ತವ್ಯದ ಮೇಲಿದ್ದ ಚಾಲಕ-ಕಂ-ನಿರ್ವಾಹಕ ಸಿದ್ಧಪ್ಪ (ಸಂಖ್ಯೆ: 7785) ಕಲಬುರಗಿ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿದಾಗ, ತಮ್ಮ ಸುಪರ್ದಿಯಲ್ಲಿ ಇರಬೇಕಾಗಿದ್ದ ಇ.ಟಿ.ಎಂ ಯಂತ್ರವನ್ನು ಬಸ್ಸಿನಲ್ಲೇ ಬಿಟ್ಟು ತೆರಳಿದ್ದರು. ಈ ವೇಳೆ ಬಸ್ಸಿನಲ್ಲಿದ್ದ ವಿದ್ಯಾರ್ಥಿ ಪ್ರಯಾಣಿಕನೊಬ್ಬ ಇಟಿಎಂ ಯಂತ್ರ ಬಳಸಿ ಇತರ ಪ್ರಯಾಣಿಕರಿಗೆ 11 ಟಿಕೆಟ್‍ಗಳನ್ನು ವಿತರಿಸಿದ್ದು, ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದ ನಿಗಮದ ಘನತೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ, ನೌಕರರ ಶಿಸ್ತು ನಿಯಮಾವಳಿಗಳ ಪ್ರಕಾರ ಸಿದ್ಧಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಘಟನೆ ಬೆನ್ನಲ್ಲೇ ವಿಭಾಗೀಯ ನಿಯಂತ್ರಣಾಧಿಕಾರಿಗಳು ಗುರುವಾರ ವಿಭಾಗದ ಅಧೀನದಲ್ಲಿ ಬರುವ ಘಟಕ ವ್ಯವಸ್ಥಾಕರು ಮತ್ತು ಸಂಚಾರ ಸಿಬ್ಬಂದಿಗಳೊಂದಿಗೆ ವೀಡಿಯೊ ಸಂವಾದ ನಡೆಸಿ, ಸಂಸ್ಥೆಯ ನಿಯಮಗಳಂತೆ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಲು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

































