Home ಜಿಲ್ಲೆ ಕಲಬುರಗಿ ಸ್ಪರ್ಧಾತ್ಮಕ ಯುಗದಲ್ಲಿ ಕರಿಯರ್ ಗೈಡೆನ್ಸ್ ಅತ್ಯಾವಶ್ಯಕ

ಸ್ಪರ್ಧಾತ್ಮಕ ಯುಗದಲ್ಲಿ ಕರಿಯರ್ ಗೈಡೆನ್ಸ್ ಅತ್ಯಾವಶ್ಯಕ

ಕಲಬುರಗಿ: ಕರಿಯರ್ ಗೈಡೆನ್ಸ್ ವಿದ್ಯಾರ್ಥಿಗಳು ಮತ್ತು ಯುವಜನರು ತಮ್ಮ ಆಸಕ್ತಿ, ಸಾಮಥ್ರ್ಯ ಮತ್ತು ಕೌಶಲ್ಯಗಳಿಗೆ ಅನುಗುಣವಾಗಿ ಸರಿಯಾದ ವೃತ್ತಿಜೀವನವನ್ನು ಆಯ್ಕೆ ಮಾಡಲು ಸಹಾಯ ಮಾಡುವ ಪ್ರಮುಖ ಪ್ರಕ್ರಿಯೆಯಾಗಿದೆ. ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಖರವಾದ ಗುರಿಗಳನ್ನು ಹೊಂದಲು, ಉದ್ಯೋಗ ಮಾರುಕಟ್ಟೆಯ ಜ್ಞಾನ ಪಡೆಯಲು ಮತ್ತು ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳಲು ಅತ್ಯಾವಶ್ಯಕವಾಗಿದೆ ಎಂದು ಬೆಂಗಳೂರಿನ ಖ್ಯಾತ ಕರಿಯರ್ ಗೈಡೆನ್ಸ್ ತರಬೇತಿದಾರ ಚಿರಂಜೀವಿ ದೇಸಾಯಿ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯ ‘ಗೆಟ್ಸ್ ಪ್ರಥಮ ದರ್ಜೆ ಕಾಲೇಜ್’ನಲ್ಲಿ ‘ಉನ್ನತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ಯ ವತಿಯಿಂದ ಶುಕ್ರವಾರ ಜರುಗಿದ ‘ಕರಿಯರ್ ಗೈಡೆನ್ಸ್ ವಿಶೇಷ ಉಪನ್ಯಾಸ ಕಾರ್ಯಕ್ರಮ’ವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಸೂಕ್ತ ಕಾಲಕ್ಕೆ, ಸೂಕ್ತ ಮಾರ್ಗದರ್ಶನ ಅಗತ್ಯವಾಗಿದೆ. ಕರಿಯರ್ ಗೈಡೆನ್ಸ್‍ದಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಕೌಶಲ್ಯಗಳಿಗೆ ಸೂಕ್ತವಾದ ಶಿಕ್ಷಣ ಮತ್ತು ವೃತ್ತಿಜೀವನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಭವಿಷ್ಯದ ಗುರಿಗಳನ್ನು ಸ್ಪಷ್ಟಪಡಿಸಲು ಮತ್ತು ಅವುಗಳನ್ನು ಸಾಧಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಇದು ಸಹಕಾರಿಯಾಗಿದೆ. ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿನ ಬೇಡಿಕೆ, ಹೊಸ ಉದ್ಯೋಗಾವಕಾಶಗಳು ಮತ್ತು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಭವಿಷ್ಯದ ಬಗೆಗಿನ ಆತಂಕ ಕಡಿಮೆಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೆಟ್ಸ್ ಸಂಸ್ಥೆಯ ಅಧ್ಯಕ್ಷ, ಶೈಕ್ಷಣಿಕ ಚಿಂತಕ ಡಾ.ಎಚ್.ಬಿ.ಕಂಟೆಗೋಳ ಮಾತನಾಡಿ, ಕರಿಯರ್ ಗೈಡೆನ್ಸ್‍ವು ಕೇವಲ ಅಂಕಗಳಿಕೆಯಲ್ಲದೆ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ವೃತ್ತಿಜೀವನದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ಗುರುತಿಸಿ, ಅವುಗಳನ್ನು ನಿವಾರಿಸಲು ತಂತ್ರಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಶಾಲಾ ಅಥವಾ ಕಾಲೇಜು ಹಂತದಲ್ಲೇ ಕರಿಯರ್ ಗೈಡೆನ್ಸ್ ಪಡೆಯುವುದರಿಂದ ಯಶಸ್ವಿ ಮತ್ತು ತೃಪ್ತಿದಾಯಕ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಕರಿಯರ್ ಗೈಡೆನ್ಸ್ ಹಾಗೂ ಕೌಶಲ ಅಭಿವೃದ್ಧಿ ತರಬೇತಿದಾರೆ ಸುಪ್ರಿಯಾ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕಾಲೇಜಿನ ಪ್ರಾಂಶುಪಾಲೆ ಪ್ರೊ.ನೇಹಾ ಎಚ್.ಕಂಟೆಗೋಳ್, ಉಪನ್ಯಾಸಕರಾದ ಶಿವಲಿಂಗಪ್ಪ ತಳವಾರ, ಉಮಾದೇವಿ ತಿಪ್ಪಾ, ರೋಹಿಣಿ ತೋರಣ, ಶ್ರೀದೇವಿ, ಅಕಿಲಾ, ಸಿಬ್ಬಂದಿ ಭರತಕುಮಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.