
ಚಿತ್ರದುರ್ಗ,ಜ.೧೧-ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಹೋದ ಕೊಲ್ಲಾಪುರದ ಡಿವೈಎಸ್ ಪಿ ವೈಷ್ಣವಿ ಅವರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ನಡೆದಿದೆ.
ಅಪಘಾತದಲ್ಲಿ ಡಿವೈಎಸ್ ಪಿ ವೈಷ್ಣವಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದರೆ,ಅವರ ತಾಯಿ ಕಮಲ ಹರಿಬಾಬು (೬೫), ಚಾಲಕ ರಾಕೇಶ್ (೪೦) ಮೃತಪಟ್ಟಿದ್ದಾರೆ.
ಗಾಯಗೊಂಡ ಡಿವೈಎಸ್ಪಿ ವೈಷ್ಣವಿ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಡಿವೈಎಸ್‌ಪಿ ಆಗಿರುವ ವೈಷ್ಣವಿ ಅವರಿದ್ದ ಇನ್ನೋವಾ ಕಾರು ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ಹೊರಟಿತ್ತು.
ಈ ವೇಳೆ ಚಾಲಕ ಮುಂದಿದ್ದ ಲಾರಿಯನ್ನು ಹಿಂದಿಕ್ಕುವ ಅವಸರದಲ್ಲಿ ಲಾರಿಗೆ ಗುದ್ದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರು ಗಾಯಗೊಂಡಿದ್ದಾರೆ.
ಘಟನೆ ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ನಾಲ್ವರು ಸಾವು:
ಇನ್ನೊಂದೆಡೆ ಕಾರು ಹಾಗೂ ಕ್ಯಾಂಟರ್ ಲಾರಿ ಮಧ್ಯೆ ಡಿಕ್ಕಿಯಾದ ಪರಿಣಾಮ ನಾಲ್ವರು ದಾರುಣ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ನಡೆದಿದೆ.
ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ೧೫೦ಎ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿ ಕಾರಿನ ಅವಶೇಷಗಳು ದಿಕ್ಕಿಗೊಂದು ಬಿದ್ದಿವೆ.
ಸ್ಥಳದಲ್ಲೇ ದುರ್ಮರಣ:
ಕಾರಿನಲ್ಲಿದ್ದವರು ಕೂಡ ಅಪಘಾತದ ವೇಳೆ ಚೆಲ್ಲಾಪಿಲ್ಲಿಯಾಗಿ ದಿಕ್ಕಿಗೊಬ್ಬರು ಬಿದ್ದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಹಿರಿಯೂರು ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ನಿವಾಸಿಗಳೆಂದು ತಿಳಿದುಬಂದಿದೆ. ವಿಶ್ವನಾಥ್ (೨೨), ನಂಜುಂಡಿ (೨೩), ರಾಹುಲ್ (೨೩), ಯಶ್ವಂತ್ (೨೨) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ಇವರೆಲ್ಲರೂ ಹುಳಿಯಾರಿನಿಂದ ಹಿರಿಯೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಜವರಾಯನ ರೂಪದಲ್ಲಿ ಎದುರಿಗೆ ಬಂದ ಕ್ಯಾಂಟರ್ ಲಾರಿ ನಾಲ್ವರು ಯುವಕರನ್ನು ಬಲಿ ಪಡೆದಿದೆ. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


























