
ಕನಕಪುರ: ರೈತರು ವಾರ್ಷಿಕವಾಗಿ ಶೇಕಡ ಮೂರರ ಬಡ್ಡಿ ದರದಲ್ಲಿ ನೀಡುವ ಸಾಲವನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ಚಿಕ್ಕಕಲ್ಬಾಳು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಕರಾದ ಸಿ.ಎಲ್. ಪುಟ್ಟಸ್ವಾಮಿ ಕರೆ ನೀಡಿದ್ದಾರೆ.
ಸಂಘದ ೨೦೨೫-೨೬ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಭೆಗೆ ವರದಿಯನ್ನು ಮಂಡಿಸಿ ಮಾತನಾಡಿದರು. ನಮ್ಮ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ೭ ಕೋಟಿ ೮೮ ಲಕ್ಷದಷ್ಟು ಕೆಸಿಸಿ ಸಾಲವನ್ನು ನೀಡಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಸಕಾಲಕ್ಕೆ ಸಮರ್ಪಕವಾಗಿ ಮರುಪಾವತಿ ಮಾಡುವ ಮೂಲಕ ಮತ್ತೊಬ್ಬ ರೈತರ ಪ್ರಗತಿಗೆ ಕಾರಣವಾಗುವಂತೆ ಮನವಿ ಮಾಡಿದರು.
೨೦೨೫-೨೬ನೇ ಸಾಲಿನಲ್ಲಿ ೨೫ ಕೋಟಿ ೪೩ ಲಕ್ಷದ ವಾರ್ಷಿಕವಹಿವಾಟನ್ನು ಸಂಘ ನಡೆಸಿದ್ದು ಇದರಲ್ಲಿ ಆಹಾರ ಮಾರಾಟ, ರಸಗೊಬ್ಬರ ಮಾರಾಟದಿಂದ ೫ ಲಕ್ಷದ ೩೦ ಸಾವಿರ ವ್ಯಾಪಾರ ಬಂದಿದ್ದು, ಇದರಲ್ಲಿ ನಿವ್ವಳಲಾಭವಾಗಿ ೧ ಲಕ್ಷದ ೨೬ ಸಾವಿರಗಳನ್ನು ಗಳಿಸಿದೆ ಎಂದರು.
ಒಟ್ಟು ೧೪೮೨ ಸದಸ್ಯರನ್ನು ಒಳಗೊಂಡ ನಮ್ಮ ಸಂಘವು ಪ್ರತಿ ವರ್ಷ ಒಳ್ಳೆಯ ಲಾಭಾಂಶವನ್ನು ಸದಸ್ಯರಿಗೆ ನೀಡುವುದರೊಂದಿಗೆ ಸಕಾಲಕ್ಕೆ ರಸಗೊಬ್ಬರ ಮತ್ತು ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಗೆ ಮತ್ತು ಮಧ್ಯಮವಾದಿ ಸಾಲಗಳನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಂಘದ ಅಧ್ಯಕ್ಷರಾದ ಕೆ.ಬಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷರಾದ ಲಕ್ಷ್ಮಮ್ಮ, ನಿರ್ದೇಶಕರಾದ ಎಲ್.ಎಲ್. ಅಶೋಕ್ಕುಮಾರ್, ಬಿ.ಕೆ. ಶಿವಲಿಂಗಯ್ಯ, ನಾಗರಾಜು, ಕೆ. ರಮೇಶ್, ಮಾರೇಗೌಡ, ಅನುಸೂಯ, ಮಂಜುಳ, ಸಿ.ಎಚ್. ಬಸವರಾಜು, ವೇಣುಗೋಪಾಲ್, ಹಾಗೂ ಬಿಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ಅಶೋಕ್, ಮಾರಾಟ ಗುಮಾಸ್ತರಾದ ಸಿ.ಜಿ. ಶೈಲೇಶ್, ಲೆಕ್ಕಿಗರಾದ ಹೆಚ್.ಪಿ. ಶೃತಿ, ಸಹಾಯಕರಾದ ಸಿ.ಎಮ್. ದೇಶಪ್ಪ, ಡಿ. ಗ್ರೂಪ್ ನೌಕರರಾದ ಶಿವರಾಜು ಉಪಸ್ಥಿತರಿದ್ದರು.
























