
ಯಾದಗಿರಿ:ಮಾ.೧೮: ಸುರಪುರ ತಾಲ್ಲೂಕು ವೀರಶೈವ ಲಿಂಗಾಯತ ಸಮಿತಿಯಲ್ಲಿ ಹೊಸ ಚೈತನ್ಯ ತುಂಬುವ ಅಗತ್ಯವಿದೆ ಎಂದು ಹೇಳಿದ ಸಮಿತಿ ಸದಸ್ಯರು, ೧೫ ದಿನಗಳ ಒಳಗಾಗಿ ಸಾಮಾನ್ಯ ಸಭೆ ನಡೆಸಿ ಸಂಘಟನೆಯನ್ನು ಪುನರ್‌ರಚನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ ಕಲಕೇರಿ, ದೀರ್ಘಕಾಲದಿಂದ ಒಂದೇ ನಾಯಕತ್ವ ಮುಂದುವರಿದಿರುವುದು ಸಂಘಟನೆಯ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಹೊಸ ಮುಖಗಳಿಗೆ ಅವಕಾಶ ನೀಡಿದರೆ ಮಾತ್ರ ಸಮಿತಿ ಚೈತನ್ಯಗೊಂಡು ಸಮಾಜದ ಅಭಿವೃದ್ಧಿಗೆ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.
ಸಮಿತಿಯ ಆಡಳಿತದಲ್ಲಿ ಪಾರದರ್ಶಕತೆ ಅಗತ್ಯವಿದೆ ಎಂದು ಹೇಳಿದ ಅವರು, ಇದುವರೆಗೆ ಸಾಮಾನ್ಯ ಸಭೆ ನಡೆಸದಿರುವುದು ಪ್ರಶ್ನಾರ್ಹವಾಗಿದೆ. ಸಮಿತಿಯಡಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಕಲ್ಯಾಣ ಮಂಟಪಗಳ ಲೆಕ್ಕಪತ್ರಗಳನ್ನು ಸದಸ್ಯರ ಮುಂದೆ ಮಂಡಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಒಗ್ಗಟ್ಟಿಗೆ ಹೆಚ್ಚಿನ ಒತ್ತು ನೀಡಬೇಕಿದ್ದು, ಪ್ರತಿ ಹೋಬಳಿಯಲ್ಲಿ ಸಂಘಟನೆ ಬಲಪಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು. ಯುವಕರಿಗೆ ಹೆಚ್ಚಿನ ಅವಕಾಶ ನೀಡಿ, ಸಮಿತಿಯಡಿಯಲ್ಲಿ ಪ್ರತ್ಯೇಕ ಯುವ ಘಟಕ ರಚನೆ ಮಾಡುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಸಮಿತಿಯ ಮುಖ್ಯ ಗುರಿಯಾಗಬೇಕು ಎಂದು ಒತ್ತಿಹೇಳಿದ ಅವರು, ಬಸವೇಶ್ವರ ಹೆಸರಿನ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ಗ್ರಾಮೀಣ ಪ್ರದೇಶದ ಸಮಾಜದ ಬಂಧುಗಳಿಗೆ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯಗಳನ್ನು ಸುಗಮಗೊಳಿಸುವ ಅಗತ್ಯವಿದೆ ಎಂದರು.
ಇದೇ ವೇಳೆ, ಸಮಾಜದ ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರಗಳ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಿ, ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಮೂಲಕ ಸಮಿತಿಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಸಮಾಜದ ಬಡ ವರ್ಗಗಳಿಗೆ ಅದರ ಪ್ರಯೋಜನ ತಲುಪುವಂತೆ ಕ್ರಮ ಕೈಗೊಳ್ಳುವುದು ಸಮಿತಿಯ ಹೊಣೆಗಾರಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಜಗದೀಶ ಸಾಹುಕಾರ ಗೋಗಿ, ಪ್ರದೀಪ್ ರೆಡ್ಡಿ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ರಾಚಯ್ಯ ಸ್ವಾಮಿ, ಅಶೋಕ್ ಹಯ್ಯಾಳ, ರಾಘವೇಂದ್ರ ಸಾಗರ, ಅಜಯ್ ಕುಮಾರ್ ಶೆಳ್ಳಗಿ ಉಪಸ್ಥಿತರಿದ್ದರು.




















